ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಾ ಶೈಲಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಕರಣೆ ಮಾಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಅಫ್ಘಾನಿಸ್ತಾನದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರ ಭಾಷೆಯನ್ನು ಅನುಕರಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ರಂಪ್ ಅಣಕಿಸಿದ ಸುದ್ದಿಯನ್ನು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ಇನ್ನು ಪತ್ರಿಕಾ ವರದಿ ಬಗ್ಗೆ ವೈಟ್ ಹೌಸ್ ಈ ವರೆಗೂ ಪ್ರತಿಕ್ರಿಯೆ ನೀಡಿಲ್ಲವಾದರೂ, ಡೊನಾಲ್ಡ್ ಟ್ರಂಪ್ ಅವರು ಮಾತ್ರ ತಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿಲ್ಲ. ಕೆಲವು ತಮ್ಮ ವಿರುದ್ಧ ಅಪ ಪ್ರಚಾರ ಮಾಡಲು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಂಕೆಯೇ ಈ ಕುರಿತು ಪ್ರತಿಕ್ರಿಯೆ ನೀಡಿದ ಡೆಮಾಕ್ರಟಿಕ್ ಪಕ್ಷದ ಭಾರತೀಯ ಅಮೆರಿಕನ್ ಕಾಂಗ್ರೆಸ್ ಮುಖಂಡ ರಾಜಾ ಕೃಷ್ಣಮೂರ್ತಿ, 'ಅಧ್ಯಕ್ಷ ಟ್ರಂಪ್ ಮೋದಿಯವರನ್ನು ಅಣಕಿದ ಸುದ್ದಿ ಕೇಳಿ ದಿಗಿಲಾಯಿತು. ಅಮೆರಿಕನ್ನರನ್ನು ಯಾರೂ ಅವರ ಭಾಷೆಯ ಶೈಲಿಯಿಂದ ಅಳೆಯುವುದಿಲ್ಲ. ಬದಲಾಗಿ ಅವರ ದೇಶದ ಮೌಲ್ಯ ಮತ್ತು ಅವರ ಬದ್ಧತೆಯಿಂದ ಅಳೆಯುತ್ತಾರೆ' ಎಂದು ಟ್ರಂಪ್ ಗೆ ಮಾತಿನ ಛಾಟಿ ಬೀಸಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕ ವಾಹಿನಿಗಳ ವಿರುದ್ಧ ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿ ಪತ್ರಿಕೆ, ವಾಹಿನಿಗಳಿಗೆ ಫೇಕ್ ನ್ಯೂಸ್ ಪ್ರಶಸ್ತಿಯನ್ನು ಘೋಷಿಸಿದ್ದರು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ತೆರಳಿದ್ದಾಗ, ಉಭಯ ನಾಯಕರೂ ವಿವಿಧ ವಿಷಯಗಳು ಕುರಿತು ಗಂಭೀರವಾಗಿ ಮಾತುಕತೆ ನಡೆಸಿದ್ದರು.