ಪೇಶಾವರ: ನೆರೆಯ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ವಾಯುವ್ಯ ಪಾಕಿಸ್ತಾನದಲ್ಲಿ ಶುಕ್ರವಾರ ಚುನಾವಣಾ ರ್ಯಾಲಿ ವೇಳೆ ಬಾಂಬ್ ಸ್ಫೋಟಗೊಂಡಿದ್ದು, ಇಸ್ಲಾಮಿಕ್ ಪಕ್ಷದ ಹಿರಿಯ ನಾಯಕ ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜುಲೈ 25ರಂದು ನಿಗದಿಯಾಗಿರುವ ಸಂಸತ್ ಚುನವಾಣೆಗೂ ಮುನ್ನ ನಡೆದ ಮೂರನೇ ಉಗ್ರ ದಾಳಿ ಇದಾಗಿದ್ದು, ಇಂದು ಉತ್ತರ ವಜಿರಿಸ್ತಾನ್ ಗಡಿಯ ಬನ್ನು ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮಾಜಿ ಸಚಿವ ಹಾಗೂ ಜಮಿಯತ್ ಉಲೆಮಾ ಇ ಇಸ್ಲಾಮ್ ಫಜಲ್ ಕೇಂದ್ರ ನಾಯಕ ಅಕ್ರಂ ದುರಾನಿ ಅವರು ಸಹ ಗಾಯಗೊಂಡಿದ್ದಾರೆ.
ಬಾಂಬ್ ಅನ್ನು ಬೈಕ್ ಗೆ ಫಿಕ್ಸ್ ಮಾಡಿ ಬನ್ನು ಕ್ಷೇತ್ರದ ಅಭ್ಯರ್ಥಿ ದುರೈನ್ ಅವರ ವಾಹನದ ಸಮೀಪವೇ ಸ್ಫೋಟಿಸಲಾಗಿದೆ. ಸಾರ್ವಜನಿಕ ಸಭೆ ನಡೆಯುತ್ತಿದ್ದ ಸ್ಥಳದಿಂದ ಕೇವಲ 40 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಬನ್ನು ಪ್ರಾದೇಶಿಕ ಪೊಲೀಸ್ ಅಧಿಕಾರಿ ಕರೀಂ ಖಾನ್ ಅವರು ಹೇಳಿದ್ದಾರೆ.
ಜುಲೈ 10ರಂದು ಪೇಶಾವರ ನಗರದ ಚುನಾವಣಾ ರ್ಯಾಲಿ ವೇಳೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅವಾಮಿ ನ್ಯಾಷನಲ್ ಪಾರ್ಟಿ ನಾಯಕ ಹರೂನ್ ಬಿಲೋರ್ ಸೇರಿದಂತೆ 20 ಮಂದಿ ಮೃತಪಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics