ಭಯೋತ್ಪಾದನೆ: ಮತ್ತೊಮ್ಮೆ ಪಾಕಿಸ್ತಾನದ ಬೆನ್ನಿಗೆ ನಿಂತ ಚೀನಾ
ಚೀನಾ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದು, ಪಾಕಿಸ್ತಾನವನ್ನು ದೂಷಿಸುವುದು ಸೂಕ್ತವಲ್ಲ ಎಂದು ಹೇಳಿದೆ.
ಬೀಜಿಂಗ್: ಭಯೋತ್ಪಾದಕರಿಗೆ ಆರ್ಥಿಕ ಸಹಕಾರ ನೀಡುತ್ತಿರುವುದಕ್ಕೆ ಜಾಗತಿಕ ಮಟ್ಟದ ಕಗ್ಗಾವಲು ಸಂಸ್ಥೆ ಪಾಕಿಸ್ತಾನವನ್ನು ಗ್ರೇ ಲಿಸ್ಟ್ ಗೆ ಸೇರ್ಪಡೆಗೊಳಿಸಿದೆ. ಈ ಬೆನ್ನಲ್ಲೇ ಚೀನಾ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದು, ಪಾಕಿಸ್ತಾನವನ್ನು ದೂಷಿಸುವುದು ಸೂಕ್ತವಲ್ಲ ಎಂದು ಹೇಳಿದೆ.
ಚೀನಾ ಪಾಕಿಸ್ತಾನವನ್ನು ತನ್ನ ಪರಮಾಪ್ತ ರಾಷ್ಟ್ರವೆಂದು ಪರಿಗಣಿಸಿದ್ದು, ಭಯೋತ್ಪಾದನೆ ವಿಚಾರದಲ್ಲಿ ಇಡೀ ವಿಶ್ವವೇ ಪಾಕ್ ವಿರುದ್ಧವಾದರೂ ಚೀನಾ ಮಾತ್ರ ಪಾಕಿಸ್ತಾನದ ಪರವಾಗಿಯೇ ನಿಲ್ಲುತ್ತದೆ. ಎಂದಿನಂತೆ ಈ ಬಾರಿಯೂ ಪಾಕಿಸ್ತಾನದ ಪರ ಮಾತನಾಡಿರುವ ಚೀನಾ ವಿದೇಶಾಂಗ ಇಲಾಖೆ, ಭಯೋತ್ಪಾದಕರಿಗೆ ಸಂದಾಯವಾಗುತ್ತಿರುವ ಆರ್ಥಿಕ ಸಹಕಾರವನ್ನು ನಿಗ್ರಹಿಸುವ ಕಣ್ಗಾವಲು ಸಂಸ್ಥೆ ಎಫ್ಎಟಿಎಫ್ ಯ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ, ಆದರೆ ಭಯೋತ್ಪಾದನೆಯನ್ನು ತಡೆಗಟ್ಟಲು ಪಾಕಿಸ್ತಾನ ಕೈಗೊಳ್ಳುತ್ತಿರುವ ಕ್ರಮಗಳನ್ನೂ ಸಹ ವಿಶ್ವಸಮುದಾಯ ಗುರುತಿಸಬೇಕಿದೆ ಎಂದು ಹೇಳಿದೆ.
ಪಾಕಿಸ್ತಾನವನ್ನು ಗ್ರೇ ಲಿಸ್ಟ್ ಗೆ ಸೇರಿಸುವುದಕ್ಕೆ ಕೈಗೊಳ್ಳಲಾದ ನಿರ್ಧಾರದ ಬಗ್ಗೆ ನಾವು ಮಾತನಾಡುವುದಿಲ್ಲ, ಆದರೆ ಉಗ್ರವಾದವನ್ನು ನಿರ್ನಾಮ ಮಾಡುವುದಕ್ಕೆ ಶ್ರಮಿಸುತ್ತಿದೆ. ಈ ಅಂಶವನ್ನೂ ವಿಶ್ವ ಸಮುದಾಯ ಮಾನ್ಯ ಮಾಡಿ ಈ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕು, ಪಾಕಿಸ್ತಾನದ ಶ್ರಮವನ್ನು ಚೀನಾ ಮಾತ್ರ ಸಮರ್ಥಿಸುತ್ತಿಲ್ಲ, ಬದಲಾಗಿ ಹಲವು ರಾಷ್ಟ್ರಗಳು ಸಮರ್ಥಿಸುತ್ತಿವೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್ ಅಭಿಪ್ರಾಯಪಟ್ಟಿದ್ದಾರೆ.