ಸೊಮಾಲಿಯಾದಲ್ಲಿ ಉಗ್ರರ ದಾಳಿ: ಕಾರು ಬಾಂಬ್ ಸ್ಫೋಟ, ಗುಂಡಿನ ದಾಳಿಗೆ 52 ಮಂದಿ ಸಾವು
ಸೊಮಾಲಿಯಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ನಡೆಸಿದ ಕಾರು ಬಾಂಬ್ ದಾಳಿಯಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ.
ಮೊಗದಿಶು: ಸೊಮಾಲಿಯಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ನಡೆಸಿದ ಕಾರು ಬಾಂಬ್ ದಾಳಿಯಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ.
ಮೊಗದಿಶುವಿನ ಸಹಾಫಿ ಹೋಟೆಲ್ ಬಳಿ ಕೇವಲ ಒಂದು ನಿಮಿಷದ ಅವಧಿಯಲ್ಲಿ ಎರಡು ಬಾಂಬ್ ಗಳು ಸ್ಫೋಟಿಸಿವೆ. ಈ ಹೋಟೆಲ್ ಸೋಮಾಲಿಯಾ ಪೊಲೀಸ್ ಫೋರ್ಸ್ನ ಸಿಐಡಿ ಮುಖ್ಯಕಚೇರಿ ಸಮೀಪವೇ ಇದ್ದು, ನಾಲ್ವರು ಉಗ್ರರು ಒಮ್ಮೆಲೇ ಹೋಟೆಲ್ ನ ಮೇಲ್ಛಾವಣಿಗೆ ಹೋಗಿ ಅಲ್ಲಿಂದ ಕೆಳಗೆ ಕುಳಿತಿರುವ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಉಗ್ರರನ್ನು ಹತ್ಯೆಗೈದು ಹೋಟೆಲ್ ರೂಮಿನಲ್ಲಿದ್ದವರನ್ನು ರಕ್ಷಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಕ ಹೋಟೆಲ್ ಬಳಿಯೇ ಎರಡು ಬಾಂಬ್ ಗಳು ಸ್ಫೋಟಗೊಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದು ಅಲ್-ಶಬಾಬ್ ಉಗ್ರಸಂಘಟನೆಯ ಕೃತ್ಯ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ ಎಂದು ಸೋಮಾಲಿಯಾ ಸರ್ಕಾರ ಹೇಳಿದೆ. 2011ರಲ್ಲಿ ಅಲ್ ಶಬಾಬ್ ಸಂಘಟನೆಯನ್ನು ಮೊಗದಿಶು ಪ್ರದೇಶದಿಂದ ಬಲವಂತವಾಗಿ ಹೊರಹಾಕಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.