ಸಾಲ ಶೂಲದ ಭೀತಿ, ಚೀನಾದ ಸಿಲ್ಕ್ ರೋಡ್ ಯೋಜನೆ ಕುರಿತು ಪಾಕ್ ಮರು ಚಿಂತನೆ!
ಚೀನಾ-ಪಾಕಿಸ್ತಾನ ದೇಶಗಳ ಸ್ನೇಹದ ಪ್ರತೀಕ ಎಂದು ಬಿಂಬಿತವಾಗಿದ್ದ ಸಿಲ್ಕ್ ರೋಡ್ ಯೋಜನೆಗೆ ಕುತ್ತು ಬಂದಿದ್ದು, ಪಾಕಿಸ್ತಾನಕ್ಕೆ ದುಬಾರಿ ಸಾಲದ ಶೂಲದ ಭೀತಿ ಎದುರಾಗುವ ಮೂಲಕ ಇಡೀ ಯೋಜನೆಗೇ ಕುತ್ತು ಬಂದಿದೆ.
ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನ ದೇಶಗಳ ಸ್ನೇಹದ ಪ್ರತೀಕ ಎಂದು ಬಿಂಬಿತವಾಗಿದ್ದ ಸಿಲ್ಕ್ ರೋಡ್ ಯೋಜನೆಗೆ ಕುತ್ತು ಬಂದಿದ್ದು, ಪಾಕಿಸ್ತಾನಕ್ಕೆ ದುಬಾರಿ ಸಾಲದ ಶೂಲದ ಭೀತಿ ಎದುರಾಗುವ ಮೂಲಕ ಇಡೀ ಯೋಜನೆಗೇ ಕುತ್ತು ಬಂದಿದೆ.
ಚೀನಾ-ಪಾಕ್ ಒಪ್ಪಂದದ ಅನ್ವಯ ಪಾಕಿಸ್ತಾನ-ಚೀನಾದೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದೆ. ಆದರೆ ಇದೇ ಅಭಿವೃದ್ಧಿ ಕಾರ್ಯ ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದೀಗ ಪಾಕ್ ಸರ್ಕಾರಕ್ಕೆ ದುಬಾರಿ ಸಾಲದ ಶೂಲಕ್ಕೆ ಒಳಗಾಗುವ ಭೀತಿಗೆ ಸಿಲುಕಿದೆ. ಪ್ರಮುಖವಾಗಿ ಅರೇಬಿಯನ್ ಸಮುದ್ರದ ರೈಲ್ವೇ ಹಳಿ ಯೋಜನೆ ತಡವಾದ ಕಾರಣ ಈ ವರೆಗೂ 8.2 ಬಿಲಿಯನ್ ಡಾಲರ್ ಹಣ ಹೆಚ್ಚುವರಿ ಸಾಲದ ಹೊಣೆ ಪಾಕ್ ಸರ್ಕಾರದ ಮೇಲೆ ಬಿದ್ದಿದೆ.
ಕರಾಚಿ ಮತ್ತು ಪೇಶಾವರ ನಡುವಿನ ಈ ಮೆಗಾ ರೈಲು ಹಳಿ ಸಂಪರ್ಕ ಜೋಡಣೆ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಅಂಗವಾಗಿದ್ದು, ಇದೀಗ ಈ ಯೋಜನೆಗಾಗಿ ಪಾಕ್ ಸರ್ಕಾರ ದುಬಾರಿ ಹಣ ವ್ಯಯಿಸುವಂತಾಗಿದೆ. ಆದರೆ ಈ ಯೋಜನೆಗೆ ಅಧಿಕ ವೆಚ್ಚ ಮಾಡಲು ನೂತನ ಇಮ್ರಾನ್ ಖಾನ್ ಸರ್ಕಾರ ಹಿಂದೇಟು ಹಾಕುತ್ತಿದ್ದು, ಇತ್ತೀಚೆಗಷ್ಟೇ ಅನಾವಶ್ಯಕ ಖರ್ಚುಗಳನ್ನು ತಗ್ಗಿಸಿ ಪಾಕಿಸ್ತಾನದ ಸಾಲದ ಹೊರೆಯನ್ನು ತಗ್ಗಿಸಬೇಕು ಎಂದು ಪಾಕ್ ಪ್ರಧಾನಿ ನಿರ್ಣಯ ಕೈಗೊಂಡಿದ್ದರು.
ಈ ನಿರ್ಣಯವೇ ಇದೀಗ ಇಡೀ ಯೋಜನೆ ಮೇಲೆ ಕರಿ ನೆರಳು ಬೀರಿದ್ದು, ಒಬೋರ್ ಯೋಜನೆಗೆ ಪಾಕ್ ಸರ್ಕಾರದ ಹಣ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಇಡೀ ಯೋಜನೆ ಮೇಲೆ ಕರಿ ನೆರಳು ಬಿದ್ದಿದೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಯೋಜನಾ ಆಯೋಗದ ಸಚಿವ ಖುಸ್ರೋ ಬಖ್ತರ್ ಅವರು, ಯೋಜನೆ ಕುರಿತಂತೆ ಪಾಕ್ ಸರ್ಕಾರ ಮರು ಚಿಂತನೆ ನಡೆಸುತ್ತಿದೆ. ಅಂತೆಯೇ ವೆಚ್ಚ ಕಡಿತಗೊಳಿಸಿ ಸಾಲದ ಹೊರೆ ತಗ್ಗಿಸಿಕೊಳ್ಳುವ ಕುರಿತು ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.