ವಿದೇಶ

ಭಾರತದೆದುರು ಮಂಡಿಯೂರಿದ ಚೀನಾ, ಮಸೂದ್ ಅಜರ್ ನಿಷೇಧಕ್ಕೆ ಇದ್ದ ಅಡ್ಡಿ ವಾಪಸ್ ಸುಳಿವು!

Srinivas Rao BV
ಬೀಜಿಂಗ್: ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನಿಷೇಧಕ್ಕೆ ವಿಶ್ವಸಂಸ್ಥೆಯಲ್ಲಿ ಈ ವರೆಗೂ ಅಡ್ಡಗಾಲು ಹಾಕಿದ್ದ ಚೀನಾ ಕೊನೆಗೂ ಭಾರತದೆದುರು ಮಂಡಿಯೂರಿದೆ. 
ಮಸೂದ್ ಅಜರ್ ನಿಷೇಧದ ವಿಷಯದಲ್ಲಿ ಕೆಲವು ಪ್ರಗತಿಗಳಾಗಿವೆ. ವಿಷಯವನ್ನು ಸರಿಯಾಗಿ ಪರಿಹರಿಸಲಾಗುವುದು ಎಂದು ಹೇಳುವ ಮೂಲಕ ಚೀನಾ ಈ ವರೆಗಿನ ತನ್ನ ಹಠಮಾರಿ ಧೋರಣೆಯನ್ನು ಬದಲಾಯಿಸಿಕೊಳ್ಳುವ ಸುಳಿವು ನೀಡಿದೆ. ಆದರೆ ನಿರ್ದಿಷ್ಟ ಸಮಯಾವಕಾಶದ ಬಗ್ಗೆ ಚೀನಾ ಏನನ್ನೂ ಹೇಳಿಲ್ಲ. 
ಮಸೂದ್ ಅಜರ್ ಗೆ  ನಿಷೇಧ ವಿಧಿಸುವ ವಿಷಯದಲ್ಲಿ ಪ್ರಗತಿ ಆಗಿದೆ. ಈ ವಿಷಯವನ್ನು ಸರಿಯಾಗಿ ಪರಿಹರಿಸಲಾಗುವುದು ಎಂದಷ್ಟೇ ಹೇಳಲು ಸಾಧ್ಯ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಮಸೂದ್ ಅಜರ್ ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ '1267 ಅಲ್ ಖೈದಾ ನಿರ್ಬಂಧಗಳ ಸಮಿತಿ' ಅಡಿಯಲ್ಲಿ ನಿಷೇಧ ವಿಧಿಸುವ ಫಾನ್ಸ್, ಬ್ರಿಟನ್, ಅಮೆರಿಕ ಪ್ರಸ್ತಾವನೆಗೆ ಈ ಹಿಂದೆ ತಾನು ವಿಧಿಸಿದ್ದ ನಿಷೇಧವನ್ನು ವಾಪಸ್ ಪಡೆಯಲು ಚೀನಾ ನಿರ್ಧರಿಸಿದೆ ಎಂಬ ವರದಿಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಚೀನಾ ವಿದೇಶಾಂಗ ಇಲಾಖೆ ವಕ್ತಾರರು ಈ ಹೇಳಿಕೆ ಮೂಲಕ ಪ್ರತಿಕ್ರಿಯೆ  ನೀಡಿದ್ದಾರೆ. 
1267 ಸಮಿತಿಯ ಪಟ್ಟಿಗೆ ಸೇರಿಸುವ ವಿಷಯವಾಗಿ ನಾವು ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ.  1267 ಸಮಿತಿ ಆಂತರಿಕವಾಗಿ  ಮಾತುಕತೆ ಮೂಲಕ  ಬಗೆಹರಿಯಬೇಕು ಎಂಬುದನ್ನು ಚೀನಾ ಬೆಂಬಲಿಸುತ್ತದೆ. ಸಮಿತಿಯಲ್ಲಿ ಮಸೂದ್ ಅಜರ್ ವಿಷಯವಾಗಿ ಬೆಳವಣಿಗೆಗಳು ನಡೆದಿದೆ. ಸಹಮತದೊಂದಿಗೆ ಈ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ವಿಷಯದಲ್ಲಿ ಸೂಕ್ತ ಪರಿಹಾರ ನೀಡಲಿದ್ದೇವೆ ಎಂದು ಜೆಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 
SCROLL FOR NEXT