ಕೊಲಂಬೊಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ ಕೋರಿದ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ
ಕೊಲಂಬೊ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ ಮಾಲ್ಡೀವ್ಸ್ ನಿಂದ ಮತ್ತೊಂದು ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಬಂದಿಳಿದರು. ದ್ವೀಪ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಮೋದಿಯವರ ಈ ಭೇಟಿಯಾಗಿದ್ದು ಭಾರತ ನೆರೆ ದೇಶಗಳೊಂದಿಗೆ ಹೊಂದಲು ಉದ್ದೇಶಿಸಿರುವ ಬಾಂಧವ್ಯ ನೀತಿಯನ್ನು ಇದು ಸಾರುತ್ತದೆ.
ಶ್ರೀಲಂಕಾಗೆ ಬಂದಿಳಿದ ಮೋದಿಯವರನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವವಾಗಿ ಸ್ವಾಗತಿಸಿದರು. ತಮ್ಮ ಭೇಟಿಯಲ್ಲಿ ಮೋದಿಯವರು ಇಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಅಲ್ಲಿನ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲಿದ್ದಾರೆ.
ಕೊಲಂಬೊ ರಾಜಧಾನಿಗೆ ಬಂದಿಳಿದ ಮೋದಿಯವರು ಕಳೆದ ಏಪ್ರಿಲ್ ನಲ್ಲಿ ಈಸ್ಟರ್ ಸಂಡೆ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಿದರು. ಬಾಂಬ್ ಸ್ಫೋಟ ನಡೆದ ಸ್ಥಳಕ್ಕೆ ಹೋಗಿ ಅಲ್ಲಿ ಗಿಡ ನೆಟ್ಟು ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದರು.
ಕಳೆದ ಏಪ್ರಿಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಬಾಂಬ್ ದಾಳಿಯಲ್ಲಿ ಸುಮಾರು 253 ಮಂದಿ ಶ್ರೀಲಂಕಾ ನಾಗರಿಕರು ಮೃತಪಟ್ಟಿದ್ದರು.
ಇನ್ನು ಮಾಲ್ಡೀವ್ಸ್ ನಲ್ಲಿ ತಮಗೆ ಸಿಕ್ಕಿರುವ ಅಭೂತಪೂರ್ವ ಸ್ವಾಗತ ಮತ್ತು ಪ್ರೀತಿಗೆ ಪ್ರಧಾನಿ ಮೋದಿ ಮಾರು ಹೋಗಿದ್ದು ತಮ್ಮ ಎರಡು ದಿನಗಳ ದ್ವೀಪ ರಾಷ್ಟ್ರಗಳ ಭೇಟಿಯಿಂದ ಉತ್ತಮವಾದ ಫಲಿತಾಂಶ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಿಪಬ್ಲಿಕನ್ ಮಾಲ್ಡೀವ್ ದೇಶದ ನಾಗರಿಕರೇ, ನಿಮ್ಮ ದೇಶದಲ್ಲಿ ಸಿಕ್ಕಿರುವ ನನಗೆ ಸಿಕ್ಕಿರುವ ಅಭೂತಪೂರ್ವ ಸ್ವಾಗತಕ್ಕೆ ನಾನು ಮಾರುಹೋದೆ. ಸರ್ಕಾರದ ಆತಿಥ್ಯ ಕೂಡ ಇಷ್ಟವಾಗಿದೆ. ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಎರಡನೇ ಬಾರಿಗೆ ಪ್ರಧಾನಿಯಾದ ನಂತರ ವಿದೇಶಕ್ಕೆ ಪ್ರಧಾನಿ ಮೋದಿ ಮೊದಲು ಭೇಟಿ ನೀಡಿದ ದೇಶ ಮಾಲ್ಡೀವ್ಸ್.
ಇಂದು ಸಂಜೆ ಮೋದಿಯವರು ನೇರವಾಗಿ ತಿರುಪತಿ ದೇವಸ್ಥಾನಕ್ಕೆ ಆಗಮಿಸಿ ನಂತರ ದೆಹಲಿಗೆ ವಾಪಸ್ಸಾಗಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos