ಒಸಾಕಾ: ಜಪಾನ್ ನ ಒಸಾಕಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿದ್ದು, ವ್ಯಾಪಾರ, ರಕ್ಷಣೆ, 5ಜಿ, ತೆರಿಗೆ ದ್ವಂದ್ವ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
ಶುಕ್ರವಾರ ಜಿ-20 ಶೃಂಗಸಭೆಯ ಔಪಚಾರಿಕ ಆರಂಭಕ್ಕೆ ಮುನ್ನ ನಡೆದ ಮಾತುಕತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಪಾರ, ರಕ್ಷಣೆ ಮತ್ತು 5ಜಿ ನೆಟ್‌ವರ್ಕ್ ಸೇರಿದಂತೆ ಹಲವು ದ್ವಿಪಕ್ಷೀಯ ವಿಚಾರಗಳ ಕುರಿತು ವಿಸ್ತೃತ ಮಾತುಕತೆ ನಡೆಸಿದರು. ಪ್ರಮುಖವಾಗಿ ಇರಾನ್ ಬಾಂಧವ್ಯ, 5ಜಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯಗಳು ಮತ್ತು ರಕ್ಷಣಾ ವಿಚಾರಗಳ ಕುರಿತು ಟ್ರಂಪ್ ಜತೆ ಮಾತುಕತೆ ನಡೆಸಲು ಬಯಸಿದ್ದಾಗಿ ಪ್ರಧಾನಿ ಮೋದಿ ತಿಳಿಸಿದರು.
ಇದೇ ವೇಳೆ ಭಾರತದ ಕುರಿತು ಅಧ್ಯಕ್ಷ ಟ್ರಂಪ್ ವ್ಯಕ್ತಪಡಿಸಿದ ಪ್ರೀತಿಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದು, ಇತ್ತೀಚೆಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಭಾರತಕ್ಕೆ ಭೇಟಿ ನೀಡಿದ್ದಾಗ ಅಧ್ಯಕ್ಷ ಟ್ರಂಪ್ ನೀಡಿದ್ದ ಪತ್ರವನ್ನು ಹಸ್ತಾಂತರಿಸಿದ್ದರು. ಅಂತೆಯೇ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಭರ್ಜರಿ ಜಯ ದಾಖಲಿಸಿದ ಮೋದಿ ಅವರಿಗೆ ಟ್ರಂಪ್ ಅಭಿನಂದನೆ ಸಲ್ಲಿಸಿದ್ದು, 'ಅದು ಬಹಳ ದೊಡ್ಡ ಗೆಲುವು. ನಿಮಗೆ ಅರ್ಹವಾಗಿಯೇ ಸಂದಿದೆ. ನೀವು ಬಹಳ ದೊಡ್ಡ ಸಾಧನೆ ಮಾಡಿದ್ದೀರಿ ಎಂದು ಶ್ಲಾಘಿಸಿದ್ದಾರೆ.
ಬಳಿಕ, ಮಿಲಿಟರಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಭಾರತ- ಅಮೆರಿಕ ಜತೆಯಾಗಿ ಕೆಲಸ ಮಾಡಲಿವೆ ಎಂದು ಟ್ರಂಪ್ ಹೇಳಿದರು. 'ನಾವು ಇನ್ನು ಹಲವು ವಿಷಯಗಳನ್ನು ಘೋಷಿಸಲಿಕ್ಕಿದ್ದೇವೆ. ವ್ಯಾಪಾರ, ಉತ್ಪಾದನೆ, 5ಜಿ ಸೇರಿದಂತೆ ಹಲವು ವಿಷಯಗಳನ್ನು ವಿಸ್ತಾರವಾಗಿ ಚರ್ಚಿಸಲಿಕ್ಕಿದ್ದೇವೆ. ನಿಮಗೆ ಅಭಿನಂದನೆಗಳು. ನಾವು ಇನ್ನಷ್ಟು ಮುನ್ನೋಟದತ್ತ ಮಾತುಕತೆ ನಡೆಲಿದ್ದೇವೆ ಎಂದು ಟ್ರಂಪ್ ಹೇಳಿದರು.
ಭಾರತದ ವಿರುದ್ಧ ಹರಿಹಾಯ್ದ ಟ್ರಂಪ್
ಭಾರತ ವಿಧಿಸಿರುವ ತೆರಿಗೆಯನ್ನು ಒಪ್ಪಲಾಗದು. ಶೀಘ್ರವೇ ಹೆಚ್ಚುವರಿ ತೆರಿಗೆಯನ್ನು ಹಿಂಪಡೆಯಬೇಕು ಎಂದು ಭಾರತದ ವಿರುದ್ಧ ಟ್ರಂಪ್ ಹರಿಹಾಯ್ದಿದ್ದಾರೆ. ಇತ್ತೀಚೆಗೆ ಭಾರತವನ್ನು ಆದ್ಯತೆಯ ರಾಷ್ಟ್ರ ಎಂಬ ಪಟ್ಟಿಯಿಂದ ಅಮೆರಿಕ ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ, ಅಮೆರಿಕದ 28 ಉತ್ಪನ್ನಗಳ ಮೇಲೆ ಭಾರತ ತೆರಿಗೆ ಹೆಚ್ಚಳ ಮಾಡಿತ್ತು. ಗುರುವಾರ ಜಪಾನ್ ಗೆ ಆಗಮಿಸುವ ಮುನ್ನ ಟ್ರಂಪ್ ಟ್ವೀಟ್ ಮಾಡಿ 'ಅಮೆರಿಕದ ಉತ್ಪನ್ನಗಳ ಮೇಲೆ ಕೆಲವು ವರ್ಷಗಳಿಂದ ಅತ್ಯಂತ ದುಬಾರಿ ತೆರಿಗೆ ವಿಧಿಸುತ್ತಿರುವ ಭಾರತದ ನೀತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಲಿದ್ದೇನೆ. ಇತ್ತೀಚೆಗೆ ಭಾರತ ಮತ್ತೊಮ್ಮೆ ತೆರಿಗೆ ಏರಿಸಿದೆ. ಇದು ನಮಗೆ ಸರ್ವಥಾ ಒಪ್ಪಿಗೆಯಿಲ್ಲ. ಈ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು' ಎಂದು ಆಗ್ರಹಿಸಿದ್ದರು.