ಬೀಜಿಂಗ್: ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ಸೋಕಿನಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ ಮೂರು ಸಾವಿರಕ್ಕೆ ಏರಿಕೆಯಾಗಿದೆ.
ಜಗತ್ತಿನ 60 ದೇಶಗಳಿಗೆ ಕೊರೋನಾ ವೈರಸ್ ಸೋಂಕು ವ್ಯಾಪಿಸಿದ್ದು ಎಚ್ಚರಿಕೆಯಿಂದ ಇರುವಂತೆ ಜನತೆಯ ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳಿಗೆ ಸೂಚನೆ ನೀಡಿದೆ. ಚೀನಾವೊಂದರಲ್ಲೇ 2,912 ಮಂದಿ ಈವರೆಗೆ ಕೊರೋನಾ ವೈರಸ್ಗೆ ಬಲಿಯಾಗಿರುವುದಾಗಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ಬೆಳಗ್ಗೆ ಮಾಹಿತಿ ನೀಡಿದೆ.
ಈ ಕಳವಳಕಾರಿ ಸುದ್ದಿಯ ನಡುವೆ ಖುಷಿಯ ವಿಚಾರವೆಂದರೆ ಕೊರೋನಾ ವೈರಸ್ ಸೋಂಕು ಪ್ರಕರಣಗಳು ದಿನೇ ದಿನೇ ತುಂಬಾ ಕಡಿಮೆಯಾಗಿದೆ. ಹುಬೇ ಹೊರಭಾಗದಲ್ಲಿ ಕೇವಲ 6 ಪ್ರಕರಣಗಳು ಮಾತ್ರ ದಾಖಲಾಗಿವೆ. ಇನ್ನು 60 ದೇಶಗಳಿಗೆ ಮಾರಕ ವೈರಸ್ ಹರಡಿದೆ. ಕೊರೋನಾ ವೈರಸ್ ಕಳೆದ ವರ್ಷ ಡಿಸೆಂಬರ್ನಲ್ಲಿ ಕೇಂದ್ರ ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಲ್ಲಿ ಸ್ಫೋಟಗೊಂಡಿತ್ತು. ಅದರಲ್ಲೂ ಜೀವಂತ ಪ್ರಾಣಿ ಮಾರುಕಟ್ಟೆಯಿಂದ ಹರಡಿತ್ತು ಎಂದು ಹೇಳಲಾಗಿದೆ.
ಯುಎಸ್ ಆಸ್ಟ್ರೇಲಿಯಾದಲ್ಲಿ ಕಳೆದ ವೀಕೆಂಡ್ನಲ್ಲಿ ಮೊದಲ ಸಾವಿನ ಪ್ರಕರಣಗಳು ವರದಿಯಾಗಿದೆ. ಕಳೆದ 48 ಗಂಟೆಗಳಲ್ಲಿ ಯುರೋಪ್ ದೇಶ ಇಟಲಿಯಲ್ಲಿ ವೈರಸ್ ಸೋಂಕಿತರ ಪ್ರಮಾಣ ದ್ವಿಗುಣವಾಗಿದೆ.
ವಯಸ್ಸಾಗಿ ಇತರೆ ಅನಾರೋಗ್ಯದಿಂದ ದುರ್ಬಲಗೊಂಡಿರುವ 60ರ ವಯೋಮಾನದವರ ಮೇಲೆ ಕೊರೋನಾ ವೈರಸ್ ಹೆಚ್ಚಾಗಿ ಪರಿಣಾಮ ಬೀರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವೈರಸ್ ತಗುಲಿದ ಅನೇಕ ಮಂದಿ ಸಣ್ಣ ಪ್ರಮಾಣದ ರೋಗದ ಲಕ್ಷಣಗಳನ್ನು ಹೊಂದಿದ್ದಾರೆ. ಶೇ. 14 ಮಂದಿ ನ್ಯೂಮೋನಿಯಾದಂತಹ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶೇ. 5 ಮಂದಿಯ ಸ್ಥಿತಿ ಹೀನಾಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.