ವೈದ್ಯಕೀಯ ಕಿಟ್ ಮಾರುವ ದುರುದ್ದೇಶದಿಂದ ಕೊರೋನಾ ವೈರಸ್ ಮಾಹಿತಿ ಮರೆಮಾಚಿದ ಚೀನಾ?; ಅಮೆರಿಕ ಗುಪ್ತಚರ ವರದಿ
ಇಡೀ ಜಗತ್ತಿಗೆ ಸಾವಿನ ಭೀತಿ ಹುಟ್ಟಿಸಿರುವ ಮಾರಕ ಕೊರೋನಾ ವೈರಸ್ ಚೀನಾದಲ್ಲೇ ಹುಟ್ಟಿತು ಎಂಬ ವಾದ ಬಲವಾಗಿ ಕೇಳಿಬರುತ್ತಿರುವಂತೆಯೇ ಇತ್ತ ಚೀನಾ ತನ್ನ ವೈದ್ಯಕೀಯ ಕಿಟ್ ಗಳನ್ನು ಜಗತ್ತಿಗೆ ಮಾರುವ ದುರುದ್ದೇಶದಿಂದ ಕೊರೋನಾ ವೈರಸ್ ಕುರಿತ ಮಾಹಿತಿಯನ್ನು ಮರೆಮಾಚಿತು ಎಂಬ ಗಂಭೀರ ಆರೋಪವನ್ನು ಅಮೆರಿಕ ಗುಪ್ತಚರ ಇಲಾಖೆ ನೀಡಿದೆ.
ವಾಷಿಂಗ್ಟನ್: ಇಡೀ ಜಗತ್ತಿಗೆ ಸಾವಿನ ಭೀತಿ ಹುಟ್ಟಿಸಿರುವ ಮಾರಕ ಕೊರೋನಾ ವೈರಸ್ ಚೀನಾದಲ್ಲೇ ಹುಟ್ಟಿತು ಎಂಬ ವಾದ ಬಲವಾಗಿ ಕೇಳಿಬರುತ್ತಿರುವಂತೆಯೇ ಇತ್ತ ಚೀನಾ ತನ್ನ ವೈದ್ಯಕೀಯ ಕಿಟ್ ಗಳನ್ನು ಜಗತ್ತಿಗೆ ಮಾರುವ ದುರುದ್ದೇಶದಿಂದ ಕೊರೋನಾ ವೈರಸ್ ಕುರಿತ ಮಾಹಿತಿಯನ್ನು ಮರೆಮಾಚಿತು ಎಂಬ ಗಂಭೀರ ಆರೋಪವನ್ನು ಅಮೆರಿಕ ಗುಪ್ತಚರ ಇಲಾಖೆ ನೀಡಿದೆ.
ಈ ಬಗ್ಗೆ ಸ್ವತಃ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು ಮಾತನಾಡಿದ್ದು, ಕೊರೋನಾ ವೈರಸ್ ಚೀನಾದ ಪ್ರಯೋಗಾಲಯದಲ್ಲಿಯೇ ಸೃಷ್ಟಿಯಾಗಿದೆ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆ. ಅತ್ಯುನ್ನತ ಗುಣಮಟ್ಟದ ಪ್ರಯೋಗಾಲಯಗಳನ್ನು ಹೊಂದಿರುವ ಚೀನಾ, ಪ್ರಪಂಚಕ್ಕೆ ಸೋಂಕು ತಗುಲಿಸುವ ಇತಿಹಾಸವನ್ನು ಹೊಂದಿದೆ ಎಂದು ಹೇಳಿದ್ದಾರೆ.
ವಾಸ್ತವ ಮರೆಮಾಚಿದ ಚೀನಾ
ಕೊರೋನಾ ವೈರಸ್ ವಿರುದ್ಧ ಹೋರಾಡಲು ಅಗತ್ಯವಿದ್ದ ವೈದ್ಯಕೀಯ ಸಾಮಗ್ರಿಗಳ ಶೇಖರಣೆಗಾಗಿ ಉದ್ದೇಶ ಪೂರ್ವಕವಾಗಿಯೇ ಕೊರೊನಾ ಸೋಂಕಿನ ದುರಂತದ ತೀವ್ರತೆಯನ್ನು ಚೀನಾ ಜಗತ್ತಿನಿಂದ ಮರೆಮಾಚಿತ್ತು ಎಂದು ಅಮೆರಿಕದ ಗುಪ್ತಚರ ಇಲಾಖೆ ವರದಿ ತಿಳಿಸಿದೆ.
ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಚೀನಾದ ನಾಯಕರು ಜನವರಿ ಆರಂಭದಲ್ಲೇ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟರು ಎಂದು ಮೇ 1 ರಂದು ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ (ಡಿಎಚ್ಎಸ್) ನಾಲ್ಕು ಪುಟಗಳ ವರದಿಯನ್ನು ಸರ್ಕಾರಕ್ಕೆ ನೀಡಿದೆ ಎನ್ನಲಾಗಿದ್ದು, ಈ ವರದಿಯನ್ನು ಉಲ್ಲೇಖಿಸಿ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಬಿತ್ತರಿಸಿದೆ.
ವರದಿಯಲ್ಲಿರುವಂತೆ ಕೊರೋನಾ ವೈರಸ್ನ ಸಾಂಕ್ರಾಮಿಕಗೊಳ್ಳುವ ಗುಣಲಕ್ಷಣಗಳನ್ನು ಚೀನಾ ಜನವರಿ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೂ ತಿಳಿಸಿರಲಿಲ್ಲ. ಜಗತ್ತಿನ ಇತರ ದೇಶಗಳಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳುವುದು, ಮಾಸ್ಕ್, ಗೌನ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಪ್ರಯತ್ನವನ್ನು ಚೀನಾ ನಡೆಸಿತ್ತು. ಕಳೆದ ಜನವರಿಯಲ್ಲಿ ಚೀನಾದ ಆಮದು, ರಫ್ತು ಪ್ರಮಾಣವೂ ಸಹಜವಾಗಿರಲಿಲ್ಲ. ಆಮದು–ರಫ್ತಿನಲ್ಲಿ ಅದರ ವರ್ತನೆ ಗಣನೀಯವಾಗಿ ಬದಲಾಗಿತ್ತು. ಚೀನಾ ಜನವರಿಯಿಂದಲೇ ವೈದ್ಯಕೀಯ ಸಾಮಾಗ್ರಿಗಳಲ್ಲಿ ಶೇ.90ರಷ್ಟು ರಫ್ತು ನಿಲ್ಲಿಸಿತ್ತು. ಅಲ್ಲದೆ ವಿದೇಶಗಳಿಗೆ ರಫ್ತಾಗುತ್ತಿದ್ದ ಔಷಧಿಗಳ ನಿಯಂತ್ರಿಸುವ ಉದ್ದೇಶದಿಂದ ಆಯಾ ಸಂಸ್ಥೆಗಳಿಗೆ ಸರಬರಾಜಾಗುತ್ತಿದ್ದ ಕಚ್ಛಾ ಸಾಮಾಗ್ರಿಗಳನ್ನು ಉದ್ದೇಶಪೂರ್ವಕವಾಗಿಯೇ ನಿಧಾನಗತಿಯಾಗುವಂತೆ ಮಾಡಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.