ವಿದೇಶ

ಕೊರೋನಾ ಲಸಿಕೆ ಪ್ರಯೋಗದ ವೇಳೆ ಸ್ವಯಂಸೇವಕರಲ್ಲಿ ವಿಚಿತ್ರ ಕಾಯಿಲೆ ಪತ್ತೆ, ಪ್ರಯೋಗ ನಿಲ್ಲಿಸಿದ ಬ್ರಿಟನ್ ಸಂಸ್ಥೆ!

Srinivasamurthy VN

ಲಂಡನ್​: ಮಹಾಮಾರಿ ಕೊರೊನಾ ವೈರಸ್​ ಗೆ ಕಂಡು ಹಿಡಿಯಲಾಗಿದ್ದ ಲಸಿಕೆ ಪ್ರಯೋಗದ ವೇಳೆ ಸ್ವಯಂಸೇವಕರೊಬ್ಬರಲ್ಲಿ ವಿಚಿತ್ರ ಕಾಯಿಲೆ ಪತ್ತೆಯಾದ ಹಿನ್ನಲೆಯಲ್ಲಿ ಬ್ರಿಟನ್ ನ ಪ್ರಮುಖ ಸಂಸ್ಥೆಯೊಂದು ತನ್ನ ಲಸಿಕಾ ಪ್ರಯೋಗವನ್ನೇ ತಾತ್ಕಾಲಿಕವಾಗಿ ನಿಲ್ಲಿಸಿದೆ.

ಹೌದು.. ಕೊರೋನಾ ವೈರಸ್ ಸೆಗೆ ಔಷಧಿ ಕಂಡುಹಿಡಿಯಲು ಜಗತ್ತಿನ ನೂರಾರು ಸಂಸ್ಥೆಗಳು ಪ್ರಯೋಗ ನಡೆಸುತ್ತಿದ್ದು, ಈ ಪೈಕಿ ಹಲವಾರು ಸಂಸ್ಥೆಗಳು ತಾವು ಕಂಡುಹಿಡಿದಿರುವ ಲಸಿಕೆಯ ಕ್ಲಿನಿಕಲ್ ಪ್ರಯೋಗ ಕೂಡ ನಡೆಸುತ್ತಿವೆ. ಈ ಪೈಕಿ ಬ್ರಿಟನ್ ಮೂಲದ  ಔಷಧ ಕಂಪನಿ ಅಸ್ಟ್ರಾ ಝೆನೆಕಾ ಕೂಡ ಲಸಿಕೆ  ಕಂಡು ಹಿಡಿಯುವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ಈ ಸಂಸ್ಥೆಯ ಲಸಿಕೆ ಪ್ರಯೋಗದ ವೇಳೆ ಸ್ವಯಂಸೇವಕರಲ್ಲಿ ವಿಚಿತ್ರ ಕಾಯಿಲೆ ಪತ್ತೆಯಾಗಿದೆ. ಹೀಗಾಗಿ ಈ ಸಂಸ್ಥೆ ತನ್ನ ಲಸಿಕಾ ಪ್ರಯೋಗವನ್ನೇ ತಾತ್ಕಾಲಿಕವಾಗಿ ನಿಲ್ಲಿಸಿದೆ ಎನ್ನಲಾಗಿದೆ. 

ಅಸ್ಟ್ರಾ ಝೆನೆಕಾ ಸಂಸ್ಥೆಯು ಬ್ರಿಟನ್ ನ ಪ್ರತಿಷ್ಠಿತ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಜತೆ ಸೇರಿ ಕೊರೊನಾಗೆ ಔಷಧವನ್ನು ಅಭಿವೃದ್ಧಿಪಡಿಸುತ್ತಿದೆ. ಕೊವಿಡ್ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಈ ಸಂಸ್ಥೆ ಕೂಡ ಮುಂಚೂಣಿಯಲ್ಲಿದ್ದು, ಈಗಾಗಲೇ ರ್ಯಾಂಡಮ್​ ಕ್ಲಿನಿಕಲ್​ ಟ್ರಯಲ್​ ಅನ್ನು ಕಂಪನಿ ನಡೆಸುತ್ತಿದೆ.  ಇದೇ ಪರೀಕ್ಷೆ​ ವೇಳೆ ಒರ್ವ ಸ್ವಯಂ ಸೇವಕನಿಗೆ ನೀಡಿದ ಔಷಧದಿಂದ ಆತನಲ್ಲಿ ವಿವರಿಸಲಾಗದ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಈ ಪರೀಕ್ಷೆಗೆ ಸಂಸ್ಥೆ ವಿರಾಮ ನೀಡಿದೆ.

ಈ ಬಗ್ಗೆ ಸಂಸ್ಥೆಯ ವಕ್ತಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 'ಸುಧೀರ್ಘ ಕ್ಲೀನಿಕಲ್​ ಟ್ರಯಲ್​ನಲ್ಲಿ ಕೆಲವೊಮ್ಮೆ ಅನಾರೋಗ್ಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಅದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ರೋಗಿಯು ಎಲ್ಲಿದ್ದಾನೆ? ಅಥವಾ ಅವರ ಅನಾರೋಗ್ಯದ ಸ್ವರೂಪ ಮತ್ತು  ತೀವ್ರತೆ ಕುರಿತು ತಕ್ಷಣವೇ ಯಾವುದೂ ಸ್ಪಷ್ಟವಾಗಿಲ್ಲ. ಕ್ಲಿನಿಕಲ್ ಪ್ರಯೋಗಗಳ ಸಮಯದಲ್ಲಿ ಹಿಡಿತ ಸಾಧಿಸುವುದು ಸುಲಭವಲ್ಲ. ಆದರೆ, ಕೋವಿಡ್-19 ಲಸಿಕೆ ಪ್ರಯೋಗದ ವೇಳೆ ಇದು ಮೊದಲ ಬಾರಿಗೆ ಸಂಭವಿಸಿದೆ ಎಂದು ಭಾವಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಪ್ರಸ್ತುತ ಕೊರೊನಾ ಔಷಧ ಕಂಡುಹಿಡಿಯುವಲ್ಲಿ ಮೂರನೇ ಹಂತದ ಟ್ರಯಲ್​ ನಡೆಡಸುತ್ತಿರುವ 9 ಕಂಪನಿಗಳಲ್ಲಿ ಅಸ್ಟ್ರಾ ಝೆನೆಕಾ ಕಂಪನಿಯು ಕೂಡ ಒಂದು. ಈ ಸಂಸ್ಥೆ AZD1222 ಎಂಬ ಲಸಿಕೆ ಕಂಡು ಹಿಡಿದಿದ್ದು, ಈ ಲಸಿಕೆಯ ಕ್ಲಿನಿಕಲ್ ಪ್ರಯೋಗ ನಡೆಸುತ್ತಿದೆ.  ಇದೇ ಕಂಪನಿ ಅಮೆರಿಕದಲ್ಲಿ ಆಗಸ್ಟ್ 31 ರಂದು 30,000 ಸ್ವಯಂಸೇವಕರನ್ನು ಪರೀಕ್ಷೆಗೆ ಬಳಸಿಕೊಂಡಿತ್ತು. ಇದೀಗ ಇದೇ ಲಸಿಕೆಯಿಂದ ಸ್ವಯಂ ಸೇವಕರಲ್ಲಿ ವಿಚಿತ್ರ ಕಾಯಿಲೆ ಪತ್ತೆಯಾಗಿದೆ ಎನ್ನಲಾಗಿದೆ.

ಹಲವು ಹಂತಗಳಲ್ಲಿ ಪ್ರಯೋಗ ನಡೆಸಿದ ನಡೆಸಿದ ಲಸಿಕೆಗಳ ಅಡ್ಡಪರಿಣಾಮಗಳು ಬಹಳ ವಿರಳ. ಒಂದು ವೇಳೆ ಅಂತಿಮ ಹಂತದ ಪ್ರಯೋಗಗಳಲ್ಲಿ ಗುರುತಿಸಲ್ಪಟರೆ, ಜನರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

SCROLL FOR NEXT