ವಿದೇಶ

ತಾಲಿಬಾನ್ ಆಕ್ರಮಣಕ್ಕೆ ಬೆದರಿ ಆಫ್ಘನ್ ಹಂಗಾಮಿ ವಿತ್ತ ಸಚಿವ ಪಲಾಯನ!

Harshavardhan M

ಕಾಬೂಲ್: ಅಫ್ಘಾನಿಸ್ತಾನದ ಹಂಗಾಮಿ ವಿತ್ತಸಚಿವ ಖಾಲಿದ್ ಪಯೆಂದಾ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಲ್ಲದೆ ದೇಶ ಬಿಟ್ಟು ತೆರಳಿದ್ದಾರೆ. ಇನ್ನುಮುಂದೆ ಅವರು ದೇಶಕ್ಕೆ ಮರಳುವುದಿಲ್ಲ ಎನ್ನಲಾಗಿದೆ. ದೇಶಾದ್ಯಂತ ತಾಲಿಬಾನ್ ಮತ್ತು ಆಫ್ಘನ್ ಭದ್ರತಾ ಪಡೆಗಳ ನಡುವ ತೀವ್ರ ಕಾಳಗ ನಡೆಯುತ್ತಿರುವ ನಡುವೆಯೇ ಅವರು ದೇಶ ತೊರೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಅಫ್ಘಾನಿಸ್ತಾನ ನಾಯಕರು ಅವರ ದೇಶಕ್ಕಾಗಿ ಹೋರಾಡಬೇಕು ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಕರೆ ನೀಡಿರುವುದು ಗಮನಾರ್ಹ.

ಕಳೆದ 20 ವರ್ಷಗಳಿಂದ ದೇಶದಲ್ಲಿ ಠಿಕಾಣಿ ಹೂಡಿದ್ದ ಅಮೆರಿಕ ಸೈನಿಕರು ಸ್ವದೇಶಕ್ಕೆ ಮರಳುತ್ತಿರುವ ಬೆನ್ನಲ್ಲೇ ಪರಿಸ್ಥಿತಿಯ ಲಾಭ ಪಡೆದುಕೊಂಡ ತಾಲಿಬಾನ್ ಆಫ್ಘನ್ ಭದ್ರತಾ ಪಡ್ದೆಗಳ ವಿರುದ್ಧ ಕಾದಾಟಕ್ಕೆ ಇಳಿದಿತ್ತು. ಶೇ.60 ಪ್ರತಿಶತಕ್ಕೂ ಹೆಚ್ಚು ಭಾಗವನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎನ್ನಲಾಗುತ್ತಿದೆ. ಅಲ್ಲದೆ ದೇಶದ 9 ಪ್ರಾಂತೀಯ ರಾಜಧಾನಿಗಳನ್ನು ತಾಲಿಬಾನ್ ಅಕ್ರಮಿಸಿಕೊಂಡಿದೆ. ಕಳೆದ ನಾಲ್ಕೈದು ದಿನಗಳಲ್ಲಿ ತಾಲಿಬಾನ್ ಈ ನಗರಗಳನ್ನು ಗೆದ್ದುಕೊಂಡಿದೆ. 

ಈ ಬಗ್ಗೆ ಟ್ವಿಟ್ಟರಿನಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ ಖಾಲಿದ್ ಅವರು ನಾನು ಇಂದು ಹಂಗಾಮಿ ವಿತ್ತ ಸಚಿವ ಸ್ಥಾನದಿಂದ ಕೆಳಕ್ಕೆ ಇಳಿಯುತ್ತಿದ್ದೇನೆ. ಈ ಹುದ್ದೆಯನ್ನು ನಿರ್ವಹಿಸಿದ್ದು ನನ್ನ ಜೀವನದ ಅತಿ ದೊಡ್ಡ ಗೌರವ. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಈ ಸ್ಥಾನವನ್ನು ತ್ಯಜಿಸಬೇಕಾಗಿ ಬಂದಿದೆ. ಆದಾಯ ಮತ್ತು ತೆರಿಗೆ ಖಾತೆಯನ್ನು ನಿರ್ವಹಿಸುತ್ತಿರುವ ಆಲೆಂ ಶಾ ಇಬ್ರಾಹಿಮಿ ಅವರಿಗೆ ನನ್ನ ಖಾತೆಯ ಜವಾಬ್ದಾರಿಯನ್ನು ವಹಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅವರು ಯಾವ ದೇಶಕ್ಕೆ ಹೋಗಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

SCROLL FOR NEXT