ವಿದೇಶ

'ಅಮ್ನೆಸ್ಟಿ' ಘೋಷಿಸಿದ ತಾಲಿಬಾನ್, ಸರ್ಕಾರ ಸೇರುವಂತೆ ಮಹಿಳೆಯರಿಗೆ ಒತ್ತಾಯ

Lingaraj Badiger

ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನದಾದ್ಯಂತ "ಅಮ್ನೆಸ್ಟಿ" ಘೋಷಿಸಿದೆ ಮತ್ತು ಮಹಿಳೆಯರು ತಮ್ಮ ಸರ್ಕಾರ ಸೇರಬೇಕು ಎಂದು ಮಂಗಳವಾರ ಒತ್ತಾಯಿಸಿದೆ.

ದೇಶ ತೊರೆಯುವುದಕ್ಕಾಗಿ ಸಾವಿರಾರು ಜನ ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾರನೇ ದಿನವೇ ಉದ್ವಿಗ್ನಗೊಂಡಿರುವ ಅಫ್ಘಾನ್ ರಾಜಧಾನಿಯನ್ನು ಶಾಂತಗೊಳಿಸಲು ತಾಲಿಬಾನ್ ಪ್ರಯತ್ನಿಸುತ್ತಿದೆ.

ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾದ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಸದಸ್ಯ ಎನಾಮುಲ್ಲಾ ಸಮಂಗನಿ ಅವರು, "ಇಸ್ಲಾಮಿಕ್ ಎಮಿರೇಟ್ ಮಹಿಳೆಯರು ಬಲಿಪಶುಗಳಾಗುವುದನ್ನು ಬಯಸುವುದಿಲ್ಲ" ಎಂದು ಹೇಳಿದ್ದಾರೆ.

"ಮಹಿಳೆಯರು ಶರಿಯಾ ಕಾನೂನಿನ ಪ್ರಕಾರ ಸರ್ಕಾರದಲ್ಲಿರಬೇಕು. ಸರ್ಕಾರದ ರಚನೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಅನುಭವದ ಆಧಾರದ ಮೇಲೆ, ಸಂಪೂರ್ಣ ಇಸ್ಲಾಮಿಕ್ ನಾಯಕತ್ವ ಇರಬೇಕು ಮತ್ತು ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಬೇಕು" ಎಂದಿರುವ ಸಮಂಗನಿ ಇತರ ವಿವರಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

ಆದಾಗ್ಯೂ, ಜನರಿಗೆ ಈಗಾಗಲೇ ಇಸ್ಲಾಮಿಕ್ ಕಾನೂನಿನ ನಿಯಮಗಳ ತಿಳಿದಿದೆ ಮತ್ತು ಅವರು ಅವುಗಳನ್ನು ಪಾಲಿಸುತ್ತಾರೆ ಎಂದು ತಾಲಿಬಾನ್ ನಿರೀಕ್ಷಿಸುತ್ತದೆ. "ನಮ್ಮ ಜನರು ಮುಸ್ಲಿಮರು ಮತ್ತು ನಾವು ಅವರನ್ನು ಇಸ್ಲಾಂಗೆ ಒತ್ತಾಯಿಸುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SCROLL FOR NEXT