ದೆಹಲಿ ಸಿಎಂ ಕೇಜ್ರಿವಾಲ್ ಹೇಳಿಕೆಗೆ ಸಿಂಗಾಪುರ ತಿರುಗೇಟು; ಆಕ್ಷೇಪ ವ್ಯಕ್ತಪಡಿಸಿದ ಭಾರತ!
ಸಿಂಗಾಪುರ ರೂಪಾಂತರಿ ವೈರಸ್ ಹೆಚ್ಚು ಅಪಾಯಕಾರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು ಇದಕ್ಕೆ ಸಿಂಗಾಪುರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಭಾರತ ಸಹ ಈ ಹೇಳಿಕೆಯನ್ನು ವಿರೋಧಿಸಿದೆ.
ನವದೆಹಲಿ: ಸಿಂಗಾಪುರ ರೂಪಾಂತರಿ ವೈರಸ್ ಹೆಚ್ಚು ಅಪಾಯಕಾರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು ಇದಕ್ಕೆ ಸಿಂಗಾಪುರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಭಾರತ ಸಹ ಈ ಹೇಳಿಕೆಯನ್ನು ವಿರೋಧಿಸಿದೆ.
ಸಿಂಗಾಪುರದಲ್ಲಿ ಕಾಣಿಸಿಕೊಂಡಿರುವ ಕೊರೋನಾ ರೂಪಾಂತರಿ ವೈರಸ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೆ ಇದು ಹೆಚ್ಚು ಅಪಾಯಕಾರಿ. ಹೀಗಾಗಿ ಸಿಂಗಾಪುರದೊಂದಿಗೆ ವಾಯು ಸೇವೆಯನ್ನು ರದ್ದುಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ಅರವಿಂದ್ ಕೇಜ್ರಿವಾಲ್ ಟ್ವೀಟ್ ಸಂಬಂಧ ಸಿಂಗಾಪುರದ ಸರ್ಕಾರ ಭಾರತದ ರಾಯಭಾರಿ ಅಧಿಕಾರಿಯನ್ನು ಕರೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು, ಭಾರತ ಮತ್ತು ಸಿಂಗಾಪುರ ಕೋವಿಡ್ ವಿರುದ್ಧ ಜೊತೆಯಾಗಿ ಹೋರಾಟ ಮಾಡುತ್ತಿವೆ. ಲಾಜಿಸ್ಟಿಕ್ಸ್ ಹಬ್ ಮತ್ತು ಆಕ್ಸಿಜನ್ ಸರಬರಾಜು ವಿಚಾರದಲ್ಲಿ ಸಿಂಗಾಪುರದ ಪಾತ್ರದ ಬಗ್ಗೆ ನಮಗೆ ಮೆಚ್ಚುಗೆ ಇದೆ. ಆ ರೀತಿಯ ಬೇಜವಾಬ್ದಾರಿ ಹೇಳಿಕೆಗಳಿಂದ ದೀರ್ಘಕಾಲದ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಕೇಜ್ರಿವಾಲ್ ಭಾರತದ ಪರವಾಗಿ ಮಾಡನಾಡಿಲ್ಲ ಎಂಬುದನ್ನು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಕೇಜ್ರಿವಾಲ್ ಟ್ವೀಟ್ ಸಂಬಂಧ ಪ್ರತಿಕ್ರಿಯಿಸಿರುವ ಸಿಂಗಾಪುರ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ರಾಜಕಾರಣಿಗಳು ಸತ್ಯವನ್ನು ಒಪ್ಪಿಕೊಳ್ಳಬೇಕು. ಸಿಂಗಾಪುರ ರೂಪಾಂತರ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.