ಹಳ್ಳಿಗಾಡು ಪರ್ವತ ಓಟ ಸ್ಪರ್ಧೆ ವೇಳೆ ಪ್ರತಿಕೂಲ ಹವಾಮಾನ: ಚೀನಾದಲ್ಲಿ 21 ಮಂದಿ ಸಾವು
100 ಕಿಲೋ ಮೀಟರ್ ಹಳ್ಳಿಗಾಡು ಪರ್ವತ ರೇಸ್ ವೇಳೆ ಪ್ರತಿಕೂಲ ಹವಾಮಾನದಿಂದ ಒಟ್ಟು 21 ಮಂದಿ ಮೃತಪಟ್ಟ ಘಟನೆ ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿ ನಡೆದಿದೆ.
ಗನ್ಸು ಪ್ರಾಂತ್ಯ(ಚೀನಾ):100 ಕಿಲೋ ಮೀಟರ್ ಹಳ್ಳಿಗಾಡು ಪರ್ವತ ರೇಸ್ ವೇಳೆ ಪ್ರತಿಕೂಲ ಹವಾಮಾನದಿಂದ ಒಟ್ಟು 21 ಮಂದಿ ಮೃತಪಟ್ಟ ಘಟನೆ ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿ ನಡೆದಿದೆ.
ಪರ್ವತ ರೇಸ್ ನಲ್ಲಿ ಒಟ್ಟು 172 ಮಂದಿ ಸ್ಪರ್ಧಿಗಳು ಭಾಗಿಯಾಗಿದ್ದು ಅವರಲ್ಲಿ 151 ಮಂದಿ ಸ್ಪರ್ಧಿಗಳು ಸುರಕ್ಷಿತವಾಗಿದ್ದಾರೆ, ಗಾಯಗೊಂಡ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಹವಾಮಾನದಲ್ಲಿ ಹಠಾತ್ ಬದಲಾವಣೆಯಾಗಿ ಸ್ಪರ್ಧಿಗಳು ಪರ್ವತದಲ್ಲಿ ಓಡುತ್ತಿದ್ದ ಸಮಯದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದು, ಗಾಳಿ ಬೀಸಿತು. ನಿನ್ನೆ ಮಧ್ಯಾಹ್ನ ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದ ಜಿಂಗ್ಟೈ ಕೌಂಟಿಯ ಹಳದಿ ನದಿ ಕಲ್ಲು ಅರಣ್ಯ ಪ್ರವಾಸಿ ತಾಣದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅತ್ಯಂತ ತಂಪಾದ ಹವಾಮಾನವು ಸ್ಪರ್ಧಿಗಳು ಮ್ಯಾರಥಾನ್ ಹೋಗುವಾಗ ಲಘೋಷ್ಣತೆಗೆ ಕಾರಣವಾಯಿತು, ಇದರ ಪರಿಣಾಮವಾಗಿ ಕೆಲವರು ನಾಪತ್ತೆಯಾದರು, ಕೊನೆಗೆ ಸ್ಪರ್ಧೆಯನ್ನು ರದ್ದುಗೊಳಿಸಲಾಯಿತು.
ಸ್ಥಳೀಯ ರಕ್ಷಣಾ ಕಮಾಂಡ್ ಕೇಂದ್ರವನ್ನು ಸ್ಥಳೀಯ ಅಧಿಕಾರಿಗಳು ಸ್ಥಾಪಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದರೂ ಪ್ರತಿಕೂಲ ಹವಾಮಾನ ಸನ್ನಿವೇಶದಲ್ಲಿ ಜನರನ್ನು ಕಾಪಾಡುವುದು ಸವಾಲಾಗಿತ್ತು. ಕ್ಲಿಷ್ಟವಾದ ಕಣಿವೆ, ರಾತ್ರಿ ಹೊತ್ತು ತಾಪಮಾನದಲ್ಲಿ ಇಳಿಕೆ, ಪರ್ವತ ಪ್ರದೇಶಕ್ಕೆ ಸರಿಯಾಗಿ ಸಂವಹನ ಸಂಪರ್ಕ ಸಾಧ್ಯವಾಗದಿದ್ದುದು ಮತ್ತಷ್ಟು ತೊಂದರೆಯಾಯಿತು.
ಕಡಿಮೆ ತಾಪಮಾನದಲ್ಲಿ ಸ್ಪರ್ಧಿಗಳು ತೆಳುವಾದ ಬಟ್ಟೆಗಳನ್ನು ಧರಿಸಿದ್ದರಿಂದ ಇನ್ನಷ್ಟು ಸಮಸ್ಯೆಯಾಯಿತು, ಪರ್ವತದಲ್ಲಿನ ತಾಪಮಾನವು 0 ಡಿಗ್ರಿ ಸೆಲ್ಸಿಯಸ್ ಗೆ ಹತ್ತಿರದಲ್ಲಿತ್ತು. ಘಟನೆಯ ಕಾರಣದ ಬಗ್ಗೆ ಆಳವಾದ ತನಿಖೆಗಾಗಿ ಸರ್ಕಾರ ತಂಡವನ್ನು ರಚಿಸಿದ್ದು ತನಿಖೆ ಮುಂದುವರಿದಿದೆ.