ವಿದೇಶ

ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡ 25,000 ಮಂದಿಗೆ ಸೇನಾನೆಲೆಗಳಲ್ಲಿ ಪುಟ್ಟ ನಗರಗಳನ್ನು ನಿರ್ಮಿಸುತ್ತಿರುವ ಅಮೆರಿಕ

Harshavardhan M

ವಾಷಿಂಗ್ಟನ್: ತಾಲಿಬಾನ್ ಕಾಬೂಲನ್ನು ಆಕ್ರಮಿಸಿಕೊಂಡಾಗಿನ ಕ್ಷಣಗಳನ್ನು ಯಾರೂ ಮರೆಯುವ ಹಾಗಿಲ್ಲ. ದೇಶದ ಜನರು ತಾಲಿಬಾನ್ ಆಡಳಿತಕ್ಕೆ ಬೆದರಿ ದೇಶ ತೊರೆಯಲು ವಿಮಾನ ನಿಲ್ದಾಣದಲ್ಲಿ ನೆರೆದು ಅದರಿಂದ ಸೃಷ್ಟಿಯಾದ ಅವಾಂತರಗಳನ್ನು ಇಡೀ ಜಗತ್ತು ಬೆಕ್ಕಸ ಬೆರಗಾಗಿ ನೋಡಿತ್ತು. 

ಎಲ್ಲಾ ಕಷ್ಟ ಕೋಟಲೆಗಳ ನಡುವೆಯೂ ಅಮೆರಿಕ ತಮ್ಮಿಂದ ಸಾಧ್ಯವಾದಷ್ಟೂ ಆಫ್ಘನ್ ನಾಗರಿಕರನ್ನು ಆ ದೇಶದಿಂದ ಹೊತ್ತು ತಂದಿತು. ಈಗ ಅಲ್ಲಿಂದ ಹೊತ್ತು ತಂದವರನ್ನು ಏನು ಮಾಡುವುದು ಎಂಬ ಚಿಂತೆಯಲ್ಲಿ ಅಮೆರಿಕ ಮುಳುಗಿತ್ತು. 

ಅಫ್ಘಾನಿಸ್ತಾನದಿಂದ ಹೊತ್ತು ತಂದ 25,000 ಆಫ್ಘನ್ನರನ್ನು ಸದ್ಯ ಅಮೆರಿಕದ 8 ಸೇನಾನೆಲೆಗಳಲ್ಲಿ ತಂದು ಬಿಟ್ಟಿದೆ. ಈಗ ಅವರಿಗೆ ಎಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವುದು ಎಂದು  ತಲೆಕೆಡಿಸಿಕೊಂಡು ಅವರಿಗಾಗಿ ಸೇನಾನೆಲೆಗಳಲ್ಲೇ ಪುಟ್ಟ ನಗರಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ.

ಸ್ಥಳಾಂತರ ಗೊಂಡಿರುವ ಆಫ್ಘನ್ನರು ಭಾಷೆ, ವಿಭಿನ್ನ ಸಂಸ್ಕೃತಿಯಿಂದಾಗಿ ಅಮೆರಿಕದಲ್ಲಿ ಹೊಂದಿಕೊಳ್ಳ ಕಷ್ಟ ಪಡುತ್ತಿದ್ದಾರೆ. ಅಲ್ಲದೆ ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಪೀಕಲಾಟ ಅಲ್ಲಿನ ನಾಗರಿಕರಿಗೂ ಸಮಸ್ಯೆ ತಂದೊಡ್ಡಬಲ್ಲುದು ಎಂದು ಬೈಡನ್ ಸರ್ಕಾರ ಯೋಜಿಸಿದೆ. 

ಆಫ್ಘನ್ನರೊಂದಿಗೆ ವ್ಯವಹರಿಸಲು ಅಮೆರಿಕ ಸೇನೆ ಆಫ್ಘನ್ ಭಾಷೆಯನ್ನು ತಿಳಿದ ಭಾಷಾಂತರಕಾರರನ್ನು ನೇಮಿಸಿದೆ ಎಂದು ತಿಳಿದುಬಂಡಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಅಮೆರಿಕ ಸೇನೆ ಇಂಗ್ಲಿಷ್ ಬಲ್ಲ ಆಫ್ಘನ್ನರನ್ನು ನೇಮಿಸಿಕೊಂಡಿತ್ತು. ಈಗ ಅಲ್ಲಿಂದ ಹೊರಬಂದ ಮೇಲೂ ಅದೇ ಪರಿಸ್ಥಿತಿ ಮುಂದುವರಿಸಿದಿರುವುದು ವಿಪರ್ಯಾಸ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT