ವಿದೇಶ

ನಟನಾ ಕೌಶಲ್ಯದಲ್ಲಿ ಇಮ್ರಾನ್ ಖಾನ್ ಅವರು ಶಾರುಖ್ ಮತ್ತು ಸಲ್ಮಾನ್‌ ಖಾನ್‌ರನ್ನು ಮೀರಿಸಿದ್ದಾರೆ: ಫಜ್ಲುರ್

Ramyashree GN

ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲಿನ ದಾಳಿ ಒಂದು ನಾಟಕವಾಗಿದೆ. ಅವರು ನಟನಾ ಕೌಶಲ್ಯದಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರನ್ನು ಮೀರಿಸಿದ್ದಾರೆ ಎಂದು ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಹೇಳಿದ್ದಾರೆ.

ಗುರುವಾರ ಬಲಗಾಲಿಗೆ ಗುಂಡು ತಗುಲಿದ್ದ ಖಾನ್ ಅವರನ್ನು ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದೀಗ ಅವರನ್ನು ಲಾಹೋರ್‌ನಲ್ಲಿರುವ ಖಾಸಗಿ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಮುಖ್ಯಸ್ಥ 70 ವರ್ಷ ಇಮ್ರಾನ್ ಖಾನ್ ಅವರಿಗೆ ಆಗಿರುವ ಗಾಯಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಪಿಡಿಎಂ ಮತ್ತು ಜಮಿಯತ್ ಉಲೇಮಾ-ಎ-ಇಸ್ಲಾಂ ಫಜಲ್ (ಜೆಯುಐ-ಎಫ್) ಮುಖ್ಯಸ್ಥ ರೆಹಮಾನ್ ಖಾನ್, ನಟನೆಯ ಕೌಶಲ್ಯದಲ್ಲಿ ಬಾಲಿವುಡ್ ತಾರೆಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರನ್ನು ಇಮ್ರಾನ್ ಖಾನ್ ಮೀರಿಸಿದ್ದಾರೆ' ಎಂದು ಹೇಳಿರುವುದಾಗಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಆರಂಭದಲ್ಲಿ ನಾನು ವಜೀರಾಬಾದ್ ಘಟನೆಯ ಬಗ್ಗೆ ಕೇಳಿದ ಮೇಲೆ ಇಮ್ರಾನ್ ಖಾನ್ ಬಗ್ಗೆ ಸಹಾನುಭೂತಿ ಹೊಂದಿದ್ದೆ, ಆದರೆ ಈಗ ಅದು ನಾಟಕ ಎಂದು ತೋರುತ್ತಿದೆ. ಖಾನ್ ಅವರ ಗಾಯಗಳ ಸುತ್ತಲಿನ ಗೊಂದಲವು ಈ ಸಂದೇಹಗಳನ್ನು ಹುಟ್ಟುಹಾಕುತ್ತದೆ ಎಂದು ರೆಹಮಾನ್ ಹೇಳಿರುವುದಾಗಿ ಡಾನ್ ಪತ್ರಿಕೆಯು ವರದಿ ಮಾಡಿದೆ.

ಇಮ್ರಾನ್ ಮೇಲೆ ಒಂದೇ ಗುಂಡು ಹಾರಿಸಲಾಗಿದೆಯೇ ಅಥವಾ ಅದಕ್ಕಿಂತ ಹೆಚ್ಚು ಮತ್ತು ಗಾಯವು ಒಂದು ಕಾಲಿನ ಮೇಲೆ ಅಥವಾ ಎರಡಕ್ಕೂ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ. ಖಾನ್ ಅವರನ್ನು ಹತ್ತಿರದ ಆಸ್ಪತ್ರೆಗೆ (ವಜೀರಾಬಾದ್‌ನಲ್ಲಿ) ದಾಖಲಿಸುವ ಬದಲು ಲಾಹೋರ್‌ಗೆ ಕರೆದುಕೊಂಡು ಹೋಗಿರುವುದು ಕುತೂಹಲ ಕೆರಳಿಸಿದೆ ಎಂದು ಮೌಲಾನಾ ಫಜಲ್ ಹೇಳಿದ್ದಾರೆ.

ಗುರುವಾರ ಗುಕ್ಖರ್‌ನಲ್ಲಿ ನಡೆದ ಸುದೀರ್ಘ ಯಾತ್ರೆಯಲ್ಲಿ ವ್ಯಕ್ತಿಯೊಬ್ಬ ಹಾರಿಸಿದ ಗುಂಡುಗಳ ಮುರಿದ ತುಂಡುಗಳಿಂದ ಇಮ್ರಾನ್ ಗಾಯಗೊಂಡಿದ್ದಾರೆ ಎಂಬ ಪಿಟಿಐ ಪಕ್ಷದ ಹೇಳಿಕೆಯನ್ನು JUI-F ಮುಖ್ಯಸ್ಥರು ವಿರೋಧಿಸಿದ್ದು, ಗುಂಡು ತುಂಡಾಗಲು ಹೇಗೆ ಸಾಧ್ಯ? ನಾವು ಬಾಂಬ್‌ನಿಂದ ತುಂಡು ಎಂದು ಕೇಳಿದ್ದೇವೆ, ಆದರೆ ಬುಲೆಟ್ ಅಲ್ಲ. ಅಂಧರು ಖಾನ್ ಅವರ ಸುಳ್ಳನ್ನು ಒಪ್ಪಿಕೊಂಡಿದ್ದಾರೆ. ಖಾನ್ ಮೇಲಿನ ದಾಳಿಯ ಬಗ್ಗೆ ಕೇಳಿದಾಗ ನಾವು ಕೂಡ (ಗುಂಡು ಹಾರಿಸಿದ ಘಟನೆ) ಖಂಡಿಸಿದ್ದೇವೆ ಎಂದಿದ್ದಾರೆ.

ಗುಂಡಿನ ಗಾಯಗಳಿಗಾಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಏಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಫಜಲ್ ಆಶ್ಚರ್ಯಚಕಿತರಾಗಿದ್ದಾರೆ. ಇತರರಿಗೆ ಕಳ್ಳರು' ಎಂದು ಹಣೆಪಟ್ಟಿ ಕಟ್ಟುವ ಇಮ್ರಾನ್ ಸ್ವತಃ "ಕಳ್ಳ"ನಾಗಿ ಹೊರಹೊಮ್ಮಿದ್ದಾರೆ. ಅವರ ಸುಳ್ಳುಗಳನ್ನು ತನಿಖೆ ಮಾಡಲು ಜೆಐಟಿ (ಜಂಟಿ ತನಿಕಾ ತಂಡ) ಯನ್ನು ರಚಿಸಬೇಕು ಎಂದು ಎಂದು ಫಜ್ಲರ್ ಹೇಳಿದರು.

ಖಾನ್ ಅವರ ಚಾರಿಟಬಲ್ ಸಂಸ್ಥೆಯ ಮಾಲೀಕತ್ವದ ಶೌಕತ್ ಖಾನಮ್ ಆಸ್ಪತ್ರೆಯಲ್ಲಿ ಬುಲೆಟ್ ಗಾಯಗಳಿಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಆದಾಗ್ಯೂ, ಭಾನುವಾರ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖಾನ್, ವಜೀರಾಬಾದ್‌ನಲ್ಲಿ ತನ್ನನ್ನೂ ಒಳಗೊಂಡಂತೆ 11 ಜನರಿಗೆ ಗುಂಡು ಹಾರಿಸಿದ ಸ್ಥಳದಿಂದಲೇ ಸುದೀರ್ಘ ಯಾತ್ರೆ ಮಂಗಳವಾರ ಪುನರಾರಂಭವಾಗಲಿದೆ ಎಂದು ಹೇಳಿದರು.

SCROLL FOR NEXT