ವಿದೇಶ

ಲಡಾಖ್ ಬಿಕ್ಕಟ್ಟು: ಭಾರತ-ಚೀನಾ ಮತ್ತೊಂದು ಸುತ್ತಿನ ಮಾತುಕತೆ; ಚರ್ಚೆಯಲ್ಲಿ ಕಂಡು ಬಾರದ ಪ್ರಗತಿ

Manjula VN

ಬೀಜಿಂಗ್: ಭಾರತ ಮತ್ತು ಚೀನಾದ ಅಧಿಕಾರಿಗಳು ಬುಧವಾರ ಬೀಜಿಂಗ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಇರುವ ಬಿಕ್ಕಟ್ಟಿನ ಕುರಿತು ಬುಧವಾರ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸಿದ್ದು, ಈ ಚರ್ಚೆಯಲ್ಲಿ ಯಾವುದೇ ಪ್ರಗತಿಯ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.

ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ವರ್ಕಿಂಗ್ ಮೆಕ್ಯಾನಿಸಂ (ಡಬ್ಲ್ಯುಎಂಸಿಸಿ) ಅಡಿಯಲ್ಲಿ ಮಾತುಕತೆಗಳನ್ನು ನಡೆಸಲಾಯಿತು.

ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ ಬಳಿ ಗಡಿ ಸಂಘರ್ಷಕ್ಕೆ ಕಾರಣವಾಗಿರುವ ಕೆಲ ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂಬ ಪ್ರಸ್ತಾವನೆ ಕುರಿತು ಚೀನಾದ ಬೀಜಿಂಗ್‌ನಲ್ಲಿ ಭಾರತ ಮತ್ತು ಚೀನಾ ದ್ವಿಪಕ್ಷೀಯ ಮಾತುಕತೆ ನಡೆಸಿದವು. ಜುಲೈ 2019 ರಲ್ಲಿ ನಡೆದ 14 ನೇ ಸಭೆಯ ನಂತರ ಇದು ಮೊದಲ ವೈಯಕ್ತಿಕ ಸಭೆಯಾಗಿದೆ.

ಭಾರತ-ಚೀನಾ ಗಡಿ ಬಿಕ್ಕಟ್ಟು ಸಮಾಲೋಚನೆ ಮತ್ತು ಸಹಯೋಗ ಕುರಿತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ (ಡಬ್ಯ್ಲುಎಂಸಿಸಿ) ಈ ಕುರಿತು ಪ್ರಸ್ತಾಪಿಸಲಾಯಿತು.

ಚೀನಾ ಮತ್ತು ಭಾರತದ ನಡುವಿನ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಉಂಟಾಗುವ ಘರ್ಷಣೆ ಮತ್ತು ಮಾತುಕತೆಯನ್ನು ನಡೆಸಲು 2021ರಲ್ಲಿ ಡಬ್ಲ್ಯೂಎಂಸಿಸಿಯನ್ನು ಸ್ಥಾಪಿಸಲಾಗಿದ್ದು, ಇದರ ಅಡಿಯಲ್ಲಿ ಉಭಯ ರಾಷ್ಟ್ರಗಳು ಮಾತುಕತೆ ನಡೆಸಿವೆ.

ವಾಸ್ತವ ಗಡಿ ನಿಯಂತ್ರಣಾ ರೇಖೆಯ ಬಳಿಯಿರುವ ಪರಿಸ್ಥಿತಿಯನ್ನು ಉಭಯ ರಾಷ್ಟ್ರಗಳು ಪರಿಶೀಲನೆ ನಡೆಸಿದ್ದು, ಸೇನಾಪಡೆಗಳನ್ನು ಹಿಂಪಡೆಯುವ ಕುರಿತಾಗಿ ಮಾತುಕತೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಚೀನಾ ಜೊತೆಗಿನ ಮಾತುಕತೆ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಚೀನಾ ಮತ್ತು ಭಾರತದ ನಡುವೆ ಸದ್ಯ ಅಸ್ಥಿತವದಲ್ಲಿರುವ ಒಪ್ಪಂದಗಳು ಮತ್ತು ರಾಜತಾಂತ್ರಿಕ ನಿಯಮಾವಳಿಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ 18 ಸುತ್ತಿನ ಸಭೆ ಆಯೋಜಿಸಲು ಉಭಯ ದೇಶಗಳು ಒಪ್ಪಿಗೆ ಸೂಚಿದವು ಎಂದು ತಿಳಿಸಿದೆ. ಆದರೆ, ಸಭೆಯಲ್ಲಿ ಯಾವ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಖಚಿತ ಮಾಹಿತಿಯನ್ನು ನೀಡಿಲ್ಲ.

ಈ ನಡುವಲ್ಲೇ ಚೀನಾದ ವಿದೇಶಾಂಗ ಸಚಿವರೂ ಕೂಡ ಬೀಜಿಂಗ್ ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತು, ಚೀನಾ-ಭಾರತ ನಡುವೆ ಚರ್ಚೆಗಳು ನಡೆದವು, ಈ ವೇಳೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ಗಾಲ್ವಾನ್ ಕಣಿವೆ ಮತ್ತು ಇರಡೆ ನಾಲ್ಕು ಪ್ರದೇಶಗಳಲ್ಲಿನ ವಿವಾದಗಳ ಕುರಿತಂತೆಯೂ ಚರ್ಚೆಗಳು ನಡೆದವು. ಗಡಿ ನಿಯಂತ್ರಣ ರೇಖೆ ಘರ್ಷಣೆಗಳ ತಪ್ಪಿಸಲು, ಶಾಂತಿ ಮತ್ತು ನೆಮ್ಮದಿಯನ್ನು ಖಚಿತಪಡಿಸಿಕೊಳ್ಳಲು ಒಪ್ಪಂದಗಳು ಮತ್ತು ಒಮ್ಮತದ ಮನೋಭಾವವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ಶಿಲ್ಪಕ್ ಅಂಬುಲೆ ಅವರು ಭಾರತೀಯ ನಿಯೋಗವನ್ನು ಮುನ್ನಡೆಸಿದ್ದರೆ, ಚೀನಾದ ವಿದೇಶಾಂಗ ಸಚಿವಾಲಯದ ಗಡಿ ವ್ಯವಹಾರಗಳ ವಿಭಾಗದ ಮಹಾನಿರ್ದೇಶಕ ಹಾಂಗ್ ಲಿಯಾಂಗ್ ಅವರು ಚೀನಾದ ನಿಯೋಗದ ನೇತೃತ್ವ ವಹಿಸಿದ್ದರು.

SCROLL FOR NEXT