ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರ ಮುಂದುವರೆದಿದ್ದು, ಅವಾಮಿ ಲೀಗ್ ಪಕ್ಷದ ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿರುವ ಪ್ರತಿಭಟನಾಕಾರರು ಪಿಠೋಪಕರಣ ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ.
ಬಾಂಗ್ಲಾದೇಶದಿಂದ ಶೇಖ್ ಹಸೀನಾ ಭಾರತಕ್ಕೆ ಪರಾರಿಯಾದ ಬಳಿಕವೂ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮುಂದುವರೆದಿದ್ದು ನಿನ್ನೆ ಕೂಡ ಕನಿಷ್ಟ 84ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪ್ರಮುಖವಾಗಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ ಎಂದು ಹೇಳಲಾಗಿದ್ದು, ರಾಜಧಾನಿ ಢಾಕಾ, ಜೆಸ್ಸೋರ್ ನಲ್ಲಿ ಹಿಂಸಾಚಾರ ವ್ಯಾಪಕವಾಗಿವೆ ಎಂದು ಹೇಳಲಾಗಿದೆ.
ಅವಾಮಿ ಲೀಗ್ ನಾಯಕ ಶಹೀನ್ ಚಕ್ಲಾದಾರ್ ಅವರಿಗೆ ಸೇರಿದ ಜೆಸ್ಸೋರ್ ನಲ್ಲಿರುವ ಹೊಟೆಲ್ ಗೆ ನುಗ್ಗಿದ ಪ್ರತಿಭಟನಾಕಾರರು ಕಚೇರಿ ಧ್ವಂಸ ಮಾಡಿ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ಅಲ್ಲದೆ ಇಡೀ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಅವಾಮಿ ಲೀಗ್ ಪಕ್ಷದ ಕಚೇರಿಗಳು ಮಾತ್ರವಲ್ಲದೇ ಸುದ್ದಿವಾಹಿನಿಗಳ ಕಚೇರಿಗಳ ಮೇಲೂ ಪ್ರತಿಭಟನಾಕಾರರು ದಾಳಿ ಮಾಡಿದ್ದಾರೆ.
ಪೊಲೀಸ್ ಠಾಣೆಗಳ ಮೇಲೆಯೇ ದಾಳಿ
ಮತ್ತೊಂದೆಡೆ ಉದ್ರಿಕ್ತ ಪ್ರತಿಭಟನಾಕಾರರು ಪ್ರತಿಭಟನೆ ಹೆಸರಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದ್ದು ಕೈಗೆ ಸಿಕ್ಕ ವಸ್ತುಗಳನ್ನು ಲೂಟಿ ಮಾಡುತ್ತಿದ್ದಾರೆ. ರಾಜಧಾನಿ ಢಾಕಾ, ಚಿತ್ತಗಾಂಗ್ ನಲ್ಲಿ ಆರು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿರುವ ಉದ್ರಿಕ್ತರು ಕೈಗೆ ಸಿಕ್ಕ ಗನ್ ಗಳು, ರೈಫಲ್ ಗಳು ಬುಲೆಟ್ ಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಇದು ಅಲ್ಲಿನ ಭದ್ರತೆ ಬಗ್ಗೆ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಅಂತೆಯೇ ಚಿತ್ತಗಾಂಗ್ ಮೆಟ್ರೋಪಾಲಿಟನ್ ಪೋಲೀಸ್ (CMP) ವ್ಯಾಪ್ತಿಯಲ್ಲಿ ಬರುವ ಚಂದಗಾಂವ್, ಪಟೇಂಗಾ, EPZ, ಕೊಟೊವಾಲಿ, ಅಕ್ಬರ್ ಶಾ ಮತ್ತು ಪಹರ್ತಾಲಿ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ.
ಶೇಖ್ ಹಸೀನಾ ಪ್ರಯಾಣಿಸಿದ್ದ ಸೇನಾ ಕಾಪ್ಟರ್ ಬಾಂಗ್ಲಾದೇಶಕ್ಕೆ ವಾಪಸ್
ಇನ್ನು ಶೇಖ್ ಹಸೀನಾ ಬಾಂಗ್ಲಾದೇಶದಿಂದ ಪರಾರಿಯಾಗಲು ಬಳಸಿದ್ದ ಸೇನಾ ಕಾಪ್ಟರ್ ರಾಜಧಾನಿ ಢಾಕಾಗೆ ವಾಪಸ್ ಆಗಿದೆ. C-130J ಸೇನಾ ಕಾಪ್ಟರ್ ಬಾಂಗ್ಲಾದೇಶದ 7 ಮಿಲಿಟರಿ ಅಧಿಕಾರಿಗಳೊಂದಿಗೆ ತವರಿಗೆ ಮರಳಿದೆ. ಕಾಪ್ಟರ್ ಪ್ರಯಾಣದುದ್ದಕ್ಕೂ ಭಾರತೀಯ ವಾಯು ಸೇನೆ ಅದರ ಮೇಲೆ ನಿಗಾ ಇರಿಸಿತ್ತು ಎನ್ನಲಾಗಿದೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸೇನಾ ಕಾಪ್ಚರ್ ಟೇಕ್ ಆಫ್ ಆಗಿದ್ದು, ಕಾಪ್ಟರ್ ನಲ್ಲಿದ್ದ ಎಲ್ಲ 7 ಅಧಿಕಾರಿಗಳು ಬಾಂಗ್ಲಾದೇಶಕ್ಕೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದೇಶಕ್ಕೆ ವಿಮಾನಗಳ ಹಾರಾಟ ರದ್ದು
ಅತ್ತ ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರ ದಾಳಿ ಮತ್ತು ಹಿಂಸಾಚಾರ ಮುಂದುವರೆದಿರುವಂತೆಯೇ ಇತ್ತ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳು ಬಾಂಗ್ಲಾದೇಶಕ್ಕೆ ವಿಮಾನ ಸೇವೆ ಸ್ಥಗಿತಗೊಳಿಸಿದೆ. ಬಾಂಗ್ಲಾದೇಶ ರಾಜಧಾನಿ ಢಾಕಾ ತೆರಳುವ ಏರ್ ಇಂಡಿಯಾ, ಇಂಡಿಗೋ, ವಿಸ್ತಾರ ವಿಮಾನಗಳು ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿವೆ.