ಢಾಕಾ: ಶೇಖ್ ಹಸೀನಾ ಅವರ ರಾಜೀನಾಮೆ ಹಾಗೂ ದೇಶ ಬಿಟ್ಟು ಪಲಾಯನಕ್ಕೆ ಕಾರಣವಾದ ಹೋರಾಟಗಾರರು ಇದೀಗ ದೇಶದ ಸುಪ್ರೀಂ ಕೋರ್ಟ್ ಅನ್ನು ಗುರಿ ಮಾಡಿಕೊಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ನ್ಯಾಯಾಧೀಶರುಗಳಿಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಒಂದು ಗಂಟೆ ಗಡುವು ನೀಡಿದ್ದಾರೆ.
ಇದರ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಮತ್ತು ಅಪೀಲು ವಿಭಾಗದ ನ್ಯಾಯಾಧೀಶರು ಇಂದೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ ಹೊರಗೆ ನಿಂತು ಪ್ರತಿಭಟಿಸುತ್ತಿದ್ದು, ತಮ್ಮ ಬೇಡಿಕೆ ಈಡೇರಿಸದೇ ಇದ್ದರೆ ನ್ಯಾಯಾಧೀಶರು ನಿವಾಸಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಘೋಷಣೆಯನ್ನು ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂಘಟಕರಲ್ಲೊಬ್ಬರಾದ ಹಸ್ನತ್ ಅಬ್ದುಲ್ಲಾ ನ್ಯಾಯಾಲಯದ ಆವರಣದಲ್ಲಿ ಮಾಡಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಭೇಷರತ್ತಾಗಿ ರಾಜೀನಾಮೆ ನೀಡಬೇಕು ಹಾಗೂ ನ್ಯಾಯಾಲಯದ ಕಲಾಪಗಳನ್ನು ಸ್ಥಗಿತಗೊಳಿಸಬೇಕೆಂದು ಇಂದು ಮುಂಜಾನೆ ದೇಶದ ಯುವಜನ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಫೇಸ್ಬುಕ್ ಪೋಸ್ಟ್ ಒಂದರ ಮುಖಾಂತರ ಆಗ್ರಹಿಸಿದ್ದರು.
ಇದರ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿಗಳು ರಾಜೀನಾಮೆ ನೀಡಲು ಒಪ್ಪಿಗೆ ನೀಡಿದ್ದಾರೆಂದು ಜಮುನಾ ಟಿವಿಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
ಒಬೈದುಲ್ ಹಸನ್ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಪ್ತ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಪ್ರತಿಭಟನೆಗಳು ಶುರುವಾಗಿವೆ ಎಂದು ವರದಿಗಳು ತಿಳಿಸಿವೆ.