ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬುಧವಾರ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸಿದರು.
ಎಲ್‌ಎಸಿಯಲ್ಲಿ ಶಾಂತಿ ಸ್ಥಾಪನೆ ಮತ್ತು ಪೂರ್ವ ಲಡಾಖ್‌ನಲ್ಲಿನ ಮಿಲಿಟರಿ ಬಿಕ್ಕಟ್ಟಿನಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡ ದ್ವಿಪಕ್ಷೀಯ ಸಂಬಂಧಗಳ ಮರುಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಕುರಿತು ವಾಂಗ್ ಯಿ ಜತೆ ದೋವಲ್ ಚರ್ಚಿಸಿದ್ದಾರೆ.
ಭಾರತೀಯ ನಿಯೋಗದ ನೇತೃತ್ವ ವಹಿಸಿರುವ ಅಜಿತ್ ದೋವಲ್ ಅವರು ಐದು ವರ್ಷಗಳ ನಂತರ ನಡೆಯುತ್ತಿರುವ ವಿಶೇಷ ಪ್ರತಿನಿಧಿಗಳ 23ನೇ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಬೀಜಿಂಗ್ ಗೆ ಆಗಮಿಸಿದ್ದಾರೆ. ಕೊನೆಯ ಸಭೆ 2019 ರಲ್ಲಿ ದೆಹಲಿಯಲ್ಲಿ ನಡೆದಿತ್ತು.
ಚೀನಾ ಕಾಲಮಾನದ ಪ್ರಕಾರ ಬೆಳಗ್ಗೆ 10 ಗಂಟೆಗೆ ಮಾತುಕತೆ ಆರಂಭವಾಗಿದ್ದು, ಪೂರ್ವ ಲಡಾಖ್‌ನಲ್ಲಿ ಅಕ್ಟೋಬರ್ 21 ರ ಒಪ್ಪಂದ ಮತ್ತು ಗಸ್ತು ತಿರುಗುವಿಕೆಯ ನಂತರ ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಉಭಯ ದೇಶಗಳಿಗೆ ಒಂದು ಮಾರ್ಗವನ್ನು ಒದಗಿಸುವ ನಿರೀಕ್ಷೆಯಿದೆ.
ಅಕ್ಟೋಬರ್ 23, 2024 ರಂದು ಕಜಾನ್‌ನಲ್ಲಿ ಉಭಯ ನಾಯಕರ ಸಭೆಯ ಸಮಯದಲ್ಲಿ ಒಪ್ಪಿಕೊಂಡಂತೆ, ಇಬ್ಬರು ವಿಶೇಷ ಪ್ರತಿನಿಧಿಗಳು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆಯ ಬಗ್ಗೆ ಚರ್ಚಿಸುತ್ತಾರೆ ಮತ್ತು ಗಡಿ ಪ್ರಶ್ನೆಗೆ ನ್ಯಾಯಯುತ, ಸಮಂಜಸ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಅನ್ವೇಷಿಸುತ್ತಾರೆ ಎಂದು MEA ಪ್ರಕಟಣೆಲ್ಲಿ ತಿಳಿಸಿದೆ.
ವಾಂಗ್ ಯಿ ಜೊತೆಗಿನ ಅಜಿತ್ ದೋವಲ್ ಭೇಟಿಯು ಭಾರತ-ಚೀನಾ ಗಡಿ ಪ್ರಶ್ನೆಯ ಮೇಲೆ ಕೇಂದ್ರೀಕರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಹೇಳಿದೆ.