ವಾಷಿಂಗ್ಟನ್: 26 ವರ್ಷದ ಭಾರತ ಮೂಲದ ವಿದ್ಯಾರ್ಥಿಯೊಬ್ಬ ಮೇ .2ರಿಂದ ಅಮೆರಿಕದ ಚಿಕಾಗೋ ನಗರದಿಂದ ನಾಪತ್ತೆಯಾಗಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ.
ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಹೈದರಾಬಾದ್ ಮೂಲದ ರೂಪೇಶ್ ಚಂದ್ರ ಚಿಂತಕಿಂಡಿ (26 ವರ್ಷ) ಎನ್ನಲಾಗಿದ್ದು, ಈತ ಕಳೆದ ಮೇ 2 ರಿಂದ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ.
ಚಿಕಾಗೋದಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ (ಸಿಜಿಐ) ಮತ್ತು ಸ್ಥಳೀಯ ಪೊಲೀಸರು ವಿಸ್ಕಾನ್ಸಿನ್‌ನ ಕಾನ್ಕಾರ್ಡಿಯಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಚಿಂತಕಿಂಡಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಅಮೇರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳು ಕಾಣೆಯಾಗುತ್ತಿರುವ ವರದಿಗಳು ಹೆಚ್ಚಾಗುತ್ತಿರುವ ಸಮಯದಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ತಿಂಗಳು, ಓಹಿಯೋದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರ್ಫಾತ್ ಅವರು ಒಂದು ತಿಂಗಳ ಕಾಲ ಕಾಣೆಯಾದ್ದು. ಇದಾದ ನಂತರ ಆತ ಶವವಾಗಿ ಪತ್ತೆಯಾಗಿದ್ದ. ಅಷ್ಟು ಮಾತ್ರವಲ್ಲದೆ ಕೇವಲ ಒಂದು ವಾರದ ಹಿಂದೆ ಉಮಾ ಸತ್ಯ ಸಾಯಿ ಗದ್ದೆ ಎಂಬ ಇನ್ನೊಬ್ಬ ಭಾರತೀಯ ವಿದ್ಯಾರ್ಥಿನಿಯೋರ್ವಳು ಓಹಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಕಳೆದ ಮಾರ್ಚ್‌ನಲ್ಲಿ, ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ 34 ವರ್ಷದ ಶಾಸ್ತ್ರೀಯ ನೃತ್ಯಗಾರ ಅಮರನಾಥ್ ಘೋಷ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಷ್ಟು ಮಾತ್ರವಲ್ಲದೆ ಫೆಬ್ರವರಿ 2 ರಂದು, ಭಾರತೀಯ ಮೂಲದ ಐಟಿ ಕಾರ್ಯನಿರ್ವಾಹಕ ವಿವೇಕ್ ತನೇಜಾ ಅವರು ವಾಷಿಂಗ್ಟನ್‌ನ ರೆಸ್ಟೋರೆಂಟ್‌ನ ಹೊರಗೆ ನಡೆದ ದಾಳಿಯ ಸಂದರ್ಭದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು.
ಕುಟುಂಬದ ಮೂಲಗಳ ಪ್ರಕಾರ ಮೇ 2 ರಂದು ರೂಪೇಶ್ ತನ್ನ ತಂದೆಯ ಜೊತೆ ಕೊನೆಯದಾಗಿ ಮಾತನಾಡಿದ್ದ ಎಂದು ಹೇಳಲಾಗಿದೆ. ಚಿಕಾಗೋದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ರೂಪೇಶ್ ಅವರನ್ನು ಸಂಪರ್ಕಿಸುವ ಕೆಲಸವನ್ನು ಮಾಡುತ್ತಿದ್ದು, ಚಿಕಾಗೋ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಮಾಹಿತಿ ನೀಡಿದೆ.