ಪ್ರಧಾನಿ ಮೋದಿ-ಲಾರೆನ್ಸ್ ವಾಂಗ್ PTI
ವಿದೇಶ

3ನೇ ಅತಿದೊಡ್ಡ ಆರ್ಥಿಕ ದೇಶವಾಗಲಿರುವ ಭಾರತದಲ್ಲಿ ಹೂಡಿಕೆ ಮಾಡುವಂತೆ ಸಿಂಗಾಪುರದ ಉದ್ಯಮಿಗಳಿಗೆ ಪ್ರಧಾನಿ ಮೋದಿ ಕರೆ!

ಹೆಚ್ಚುತ್ತಿರುವ ದೇಶೀಯ ವಿಮಾನ ದಟ್ಟಣೆಯ ದೃಷ್ಟಿಯಿಂದ ಭಾರತಕ್ಕೆ 100ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು ಮತ್ತು ಹೆಚ್ಚಿನ ವಿಮಾನಯಾನ ಸಂಸ್ಥೆಗಳ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸಿಂಗಾಪುರ: ದೇಶದ ಸೆಮಿಕಂಡಕ್ಟರ್ ಉದ್ಯಮವು ಈಗ ವೇಗವಾಗಿ ಅಭಿವೃದ್ಧಿ ಹೊಂದಲಿದೆ. ಇಲ್ಲಿ ವಿಸ್ತರಿಸುತ್ತಿರುವ ಸೆಮಿಕಂಡಕ್ಟರ್ ಉದ್ಯಮವನ್ನು ಬೆಂಬಲಿಸಲು ಭಾರತ ಮತ್ತು ಸಿಂಗಾಪುರದ ನಡುವೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರೊಂದಿಗೆ ಸಿಂಗಾಪುರ ಕಂಪನಿಗಳಿಗೆ ಮತ್ತು ಸೆಮಿಕಂಡಕ್ಟರ್ ವಲಯಕ್ಕೆ ಸಂಬಂಧಿಸಿದ ಪೂರೈಕೆ ಸರಪಳಿಗಳಿಗೆ ಭಾರತೀಯ ಮಾರುಕಟ್ಟೆಯ ಬಾಗಿಲು ತೆರೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಭೇಟಿಗಾಗಿ ಬುಧವಾರ ಸಿಂಗಾಪುರಕ್ಕೆ ತಲುಪಿದ್ದರು. ಅಲ್ಲಿ ಅವರು ಉನ್ನತ ನಾಯಕತ್ವದ ಜೊತೆಗೆ ಅಲ್ಲಿನ ವಿವಿಧ ಕ್ಷೇತ್ರಗಳ ಜನರು ಮತ್ತು ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದರು. ಎರಡೂ ದೇಶಗಳು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಸಂಬಂಧಗಳನ್ನು ಉನ್ನತೀಕರಿಸಲು ಮತ್ತು ಬಲಪಡಿಸಲು ಒಪ್ಪಿಕೊಂಡಿವೆ. ಎರಡೂ ದೇಶಗಳು ಮುಂದಿನ ವರ್ಷ ರಾಜತಾಂತ್ರಿಕ ಸಂಬಂಧಗಳ 60ನೇ ವಾರ್ಷಿಕೋತ್ಸವವನ್ನು ಆಚರಿಸಲಿವೆ.

ಪ್ರಧಾನಿಯಾಗಿ ತಮ್ಮ ಐದನೇ ಭೇಟಿಯಲ್ಲಿ ಸಿಂಗಾಪುರಕ್ಕೆ ಆಗಮಿಸಿದ ಮೋದಿ, ಸೆಮಿಕಂಡಕ್ಟರ್, ಡಿಜಿಟಲ್ ಸಹಕಾರ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಿದರು. ತಂತ್ರಜ್ಞಾನ ವಲಯದಲ್ಲಿ ಈ ಪಾಲುದಾರಿಕೆಯು ಅರೆವಾಹಕಗಳ ಮೇಲೆ ಕೇಂದ್ರೀಕರಿಸಿದ ಸುಧಾರಿತ ಉತ್ಪಾದನಾ ವಲಯವನ್ನು ದ್ವಿಪಕ್ಷೀಯ ಸಹಕಾರದ ಆಧಾರಸ್ತಂಭವಾಗಿ ಸೇರಿಸಿದಾಗ ಬಂದಿದೆ. ಪ್ರಧಾನಿ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಸೆಮಿಕಂಡಕ್ಟರ್ ಫ್ಯಾಕ್ಟರಿ AEM ಹೋಲ್ಡಿಂಗ್ ಲಿಮಿಟೆಡ್‌ಗೆ ಭೇಟಿ ನೀಡಿದರು. ಅಲ್ಲಿ ಅವರು ಸಿಂಗಾಪುರ್ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್‌ನ ಪ್ರತಿನಿಧಿಗಳನ್ನು ಭೇಟಿ ಮಾಡಿದರು.

ತೈವಾನ್ ಚಿಪ್ ತಯಾರಿಕೆಯಲ್ಲಿ ಬಹಳ ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಅದೇ ರೀತಿ ಸಿಂಗಾಪುರವು ಎಲೆಕ್ಟ್ರಿಕ್ ಕಾರುಗಳು ಮತ್ತು ಸ್ಮಾರ್ಟ್‌ಫೋನ್‌ಗಳಿಗಾಗಿ ಸಣ್ಣ ಚಿಪ್‌ಗಳನ್ನು ತಯಾರಿಸುವಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಸಿಂಗಾಪುರ ಸರ್ಕಾರದ ಪ್ರಕಾರ ದೇಶದ ಜಿಡಿಪಿಯಲ್ಲಿ ಸೆಮಿಕಂಡಕ್ಟರ್ ಉದ್ಯಮದ ಪಾಲು ಶೇ.7-8ರಷ್ಟಿದೆ. ಇದು ಜಾಗತಿಕ ಸೆಮಿಕಂಡಕ್ಟರ್ ವಲಯದಲ್ಲಿನ ಬೇಡಿಕೆಯ 10 ಪ್ರತಿಶತವನ್ನು ಪೂರೈಸುತ್ತದೆ. ಈ ವಾರದ ಆರಂಭದಲ್ಲಿ, ಭಾರತದಲ್ಲಿ ಐದನೇ ಸೆಮಿಕಂಡಕ್ಟರ್ ಘಟಕದ ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ದಿನಕ್ಕೆ 60 ಲಕ್ಷ ಚಿಪ್‌ಗಳನ್ನು ಉತ್ಪಾದಿಸುವ ಈ ಘಟಕವನ್ನು ಸ್ಥಾಪಿಸಲು 3,307 ಕೋಟಿ ರೂ. ವೆಚ್ಚವಾಗಲಿದೆ.

ಭಾರತದ ವಾಯುಯಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಸಿಂಗಾಪುರದ ಉದ್ಯಮಿಗಳಿಗೆ ಗುರುವಾರ ಕರೆ ನೀಡಿದ ಪ್ರಧಾನಿ ಮೋದಿ, ಹೆಚ್ಚುತ್ತಿರುವ ದೇಶೀಯ ವಿಮಾನ ದಟ್ಟಣೆಯ ದೃಷ್ಟಿಯಿಂದ ಭಾರತಕ್ಕೆ 100ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು ಮತ್ತು ಹೆಚ್ಚಿನ ವಿಮಾನಯಾನ ಸಂಸ್ಥೆಗಳ ಅಗತ್ಯವಿದೆ ಎಂದು ಹೇಳಿದರು. ಕೌಶಲಾಭಿವೃದ್ಧಿಯಿಂದ ರಕ್ಷಣಾ ವಲಯದವರೆಗೆ ಸಹಕಾರ ಹೆಚ್ಚಿದ್ದು, ಸಿಂಗಪುರ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ನಡುವಿನ ಒಪ್ಪಂದವು ಸಂಪರ್ಕ ಸೌಲಭ್ಯವನ್ನು ಬಲಪಡಿಸಿದೆ ಎಂದು ಅವರು ಹೇಳಿದರು.

ಸಿಂಗಾಪುರಕ್ಕೆ ಭೇಟಿ ನೀಡಿದ ಮೋದಿ, ಇಲ್ಲಿ ಹಲವಾರು ಪ್ರಮುಖ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (CEO) ಸಭೆ ನಡೆಸಿದ ಸಂದರ್ಭದಲ್ಲಿ, ವಾಯುಯಾನದ ಜೊತೆಗೆ ಇಂಧನ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಅವರನ್ನು ಆಹ್ವಾನಿಸಿದರು. ಸಿಂಗಾಪುರದ ಉದ್ಯಮಿಗಳ ಜೊತೆಗಿನ ದುಂಡು ಮೇಜಿನ ಸಭೆಯಲ್ಲಿ, ಭಾರತದ ವಾಯುಯಾನ ಕ್ಷೇತ್ರವು ಅಗಾಧ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು.

ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಹೂಡಿಕೆ ನಿಧಿಗಳು, ಮೂಲಸೌಕರ್ಯ, ಉತ್ಪಾದನೆ, ಇಂಧನ, ಸುಸ್ಥಿರ ಅಭಿವೃದ್ಧಿ ಮತ್ತು ಲಾಜಿಸ್ಟಿಕ್ಸ್ ವಲಯಗಳ ಕಂಪನಿಗಳ ಸಿಇಒಗಳಿಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT