ಢಾಕಾ: ಆಂತರಿಕ ಸಂಘರ್ಷದಿಂದ ಬೇಯುತ್ತಿರುವ ಬಾಂಗ್ಲಾದೇಶ ತಮಗೆ 800 ಮಿಲಿಯನ್ ಡಾಲರ್ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಬಾಂಗ್ಲಾದೇಶ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್ (ಬಿಪಿಡಿಬಿ) ಅದಾನಿ ಪವರ್ ಪೂರೈಸಿದ ವಿದ್ಯುತ್‌ಗಾಗಿ ಪಾವತಿಸಬೇಕಾದ $ 800 ಮಿಲಿಯನ್ ಹಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಸರ್ಕಾರಕ್ಕೆ ಅದಾನಿ ಪತ್ರ ಬರೆದಿದ್ದಾರೆ.
ಆಗಸ್ಟ್ 27 ರ ಈ ಪತ್ರದಲ್ಲಿ ವಿವರಿಸಲಾದ ವಿನಂತಿಯನ್ನು ದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರಿಗೆ ತಿಳಿಸಲಾಗಿದೆ. ಬಾಕಿ ಪಾವತಿಗಳಿಂದ ಉಂಟಾದ ಆರ್ಥಿಕ ಒತ್ತಡವನ್ನು ಪರಿಹರಿಸಲು ತಕ್ಷಣದ ಕ್ರಮದ ಅಗತ್ಯವನ್ನು ಅದಾನಿ ಪತ್ರದಲ್ಲಿ ಒತ್ತಿ ಹೇಳಿದ್ದು ಮಾತ್ರವಲ್ಲದೇ ತಮ್ಮ ಕಂಪನಿ ಎದುರಿಸುತ್ತಿರುವ ಆರ್ಥಿಕ ಒತ್ತಡದ ಬಗ್ಗೆಯೂ ಅದಾನಿ ಪತ್ರದಲ್ಲಿ ವಿವರಿಸಿದ್ದಾರೆ.
"ನಾವು ಬಾಂಗ್ಲಾದೇಶ ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ ಮತ್ತು ಈ ಸಮರ್ಥನೀಯವಲ್ಲದ ಪರಿಸ್ಥಿತಿಯ ಬಗ್ಗೆ ನಾವು ಮೌಲ್ಯಮಾಪನ ಮಾಡಿದ್ದೇವೆ, ಅಲ್ಲಿ ನಾವು ನಮ್ಮ ಪೂರೈಕೆ ಬದ್ಧತೆಯನ್ನು ಮಾತ್ರವಲ್ಲದೆ ನಮ್ಮ ಸಾಲದಾತರು ಮತ್ತು ಪೂರೈಕೆದಾರರಿಗೆ ಹೆಚ್ಚುತ್ತಿರುವ ಕರಾರುಗಳ ಹೊರತಾಗಿಯೂ ವಿದ್ಯುತ್ ಪೂರೈಸುತ್ತಿದ್ದೇವೆ. ಹೀಗಾಗಿ ಬಾಂಗ್ಲಾದೇಶದ ವಿದ್ಯುತ್ ಅಭಿವೃದ್ಧಿ ಮಂಡಳಿಯಿಂದ ಬರಬೇಕಾದ $800 ಮಿಲಿಯನ್ ಮೊತ್ತವನ್ನು ಪಾವತಿಸುವಲ್ಲಿ ನಿಮ್ಮ ರೀತಿಯ ಮಧ್ಯಸ್ಥಿಕೆಯನ್ನು ನಾನು ವಿನಂತಿಸುತ್ತೇನೆ ಎಂದು ಅದಾನಿ ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಅದಾನಿ ಪವರ್ ಸಂಸ್ಥೆ ತನ್ನ 1.6 GW ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದಿಂದ ಜಾರ್ಖಂಡ್‌ನ ಗೊಡ್ಡಾದಿಂದ ಬಾಂಗ್ಲಾದೇಶಕ್ಕೆ ವಿದ್ಯುಚ್ಛಕ್ತಿಯನ್ನು ಪೂರೈಸುತ್ತದೆ. ಇದು ಜೂನ್ 2023 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. BPDB ಯೊಂದಿಗಿನ ವಿದ್ಯುತ್ ಸರಬರಾಜು ಒಪ್ಪಂದವು 25 ವರ್ಷಗಳವರೆಗೆ ವ್ಯಾಪಿಸಿದ್ದು, ಆದರೆ ಕಂಪನಿಯು ಕೇವಲ ಭಾಗಶಃ ಪಾವತಿಗಳನ್ನು ಮಾತ್ರ ಸ್ವೀಕರಿಸುತ್ತಿದೆ. ಅಲ್ಲದೆ ಕಳೆದ ಒಂಬತ್ತು ತಿಂಗಳಿಂದ ಪಾವತಿ ಬಾಕಿ ಉಳಿದಿದೆ ಎಂದು ಮೂಲಗಳ ತಿಳಿಸಿವೆ.
ವಿದ್ಯುತ್ ಪಾವತಿ ಬಾಕಿ ಇದೆ ಎಂದು ಒಪ್ಪಿಕೊಂಡ ಸರ್ಕಾರ
ಇದೇ ವೇಳೆ ಅದಾನಿ ಪತ್ರದ ವಿಚಾರವಾಗಿ ಸ್ಪಷ್ಟೀಕರಣ ನೀಡಿರುವ ಬಾಂಗ್ಲಾದೇಶ ಉನ್ನತ ಇಂಧನ ಸಲಹೆಗಾರ ಮುಹಮ್ಮದ್ ಫೌಜುಲ್ ಕಬೀರ್ ಖಾನ್, ಅದಾನಿ ಪವರ್ ಸಂಸ್ಥೆಗೆ ವಿದ್ಯುತ್ ಪಾವತಿ ಬಾಕಿ ಇದೆ. ನಾವು ಸರ್ಕಾರಕ್ಕೆ ಸೇರಿದಾಗಿನಿಂದ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ. ಒಟ್ಟು ವಿದ್ಯುತ್ ಹೊಣೆಗಾರಿಕೆಗಳು $3.7 ಶತಕೋಟಿಯಷ್ಟಿದೆ. ಅದರಲ್ಲಿ $492 ಮಿಲಿಯನ್ ಅದಾನಿ ಪವರ್‌ಗೆ ಬಾಕಿ ಇದೆ ಎಂದು ಒಪ್ಪಿಕೊಂಡರು. ಬೆಳೆಯುತ್ತಿರುವ ಸಾಲದ ಹೊರತಾಗಿಯೂ, ಅದಾನಿ ಪವರ್ ವಿಶ್ವಾಸಾರ್ಹ ಮತ್ತು ಸ್ಪರ್ಧಾತ್ಮಕ ಬೆಲೆಯ ವಿದ್ಯುತ್ ಅನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ಬಾಂಗ್ಲಾದೇಶ ಮಧ್ಯಂತರ ಸರ್ಕಾರವು ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸರ್ಕಾರದ ಪ್ರಮುಖರಾದ ಖಾನ್ ಯೂನಸ್ ಹೇಳಿದ್ದು, ಸಹಾಯಕ್ಕಾಗಿ ವಿಶ್ವಬ್ಯಾಂಕ್‌ನಂತಹ ಅಂತರರಾಷ್ಟ್ರೀಯ ಸಾಲದಾತರನ್ನು ತಲುಪುತ್ತೇವೆ. ಅದೇ ಸಮಯದಲ್ಲಿ, ಆಡಳಿತವು ಅಸ್ತಿತ್ವದಲ್ಲಿರುವ ಇಂಧನ ಒಪ್ಪಂದಗಳನ್ನು ಹೆಚ್ಚು ವೆಚ್ಚ-ಪರಿಣಾಮಕಾರಿ ಎಂದು ಖಚಿತಪಡಿಸಿಕೊಳ್ಳಲು ಮರು ಮಾತುಕತೆ ನಡೆಸಲು ಮತ್ತು ಪರಿಶೀಲಿಸಲು ನೋಡುತ್ತಿದೆ. ಯಾರು ನಮಗೆ ಹಣಕ್ಕೆ ಮೌಲ್ಯ, ಕಡಿಮೆ ಬೆಲೆ ಮತ್ತು ಉತ್ತಮ ಗುಣಮಟ್ಟವನ್ನು ನೀಡುತ್ತಾರೆ, ನಾವು ಅವರನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಶೇಖ್ ಹಸೀನಾ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಾಂಗ್ಲಾದೇಶ ಮತ್ತು ಅದಾನಿ ಸಂಸ್ಥೆ ನಡುವೆ ವಿದ್ಯುತ್ ಪೂರೈಕೆ ಒಪ್ಪಂದ ನಡೆದಿತ್ತು.