ವಾಷಿಂಗ್ಟನ್: ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ಫಿಲಡೆಲ್ಫಿಯಾ ತಲುಪಿದ್ದಾರೆ. ಪ್ರಧಾನಿ ಮೋದಿ ವಿಶ್ವಸಂಸ್ಥೆಯ ‘ಕ್ವಾಡ್ ಶೃಂಗಸಭೆ’ಗೂ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಅಮೆರಿಕಕ್ಕೆ ಬಂದಿಳಿದ ನಂತರ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಅಧ್ಯಕ್ಷ ಬೈಡೆನ್ ಅವರೊಂದಿಗಿನ ಭೇಟಿ, ನಂತರ ಕ್ವಾಡ್ ಶೃಂಗಸಭೆಯು ಜಾಗತಿಕ ಸುಧಾರಣೆಗೆ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.
"ದಿನವಿಡೀ ನಡೆಯುವ ಚರ್ಚೆಗಳು ನಮ್ಮ ಗ್ರಹವನ್ನು ಉತ್ತಮಗೊಳಿಸಲು ಮತ್ತು ಪ್ರಮುಖ ಜಾಗತಿಕ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವಿದೆ" ಎಂದು ಫಿಲಡೆಲ್ಫಿಯಾಕ್ಕೆ ಆಗಮಿಸಿದ ನಂತರ ಪ್ರಧಾನಿ ಮೋದಿ ಹೇಳಿದ್ದಾರೆ.
ರಾತ್ರಿ 9 ಗಂಟೆ ಸುಮಾರಿಗೆ ಅಮೆರಿಕಾಗೆ ತಲುಪಿದ ಪ್ರಧಾನಿ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಫಿಲಡೆಲ್ಫಿಯಾದಲ್ಲಿ ಭಾರತೀಯ ವಲಸೆಗಾರರ ದೊಡ್ಡ ಗುಂಪು ಮೋದಿ ಅವರನ್ನು ಸ್ವಾಗತಿಸಿತು.
ಸೆಪ್ಟೆಂಬರ್ 21 ರಂದು ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿ ನಡೆಯಲಿರುವ ಕ್ವಾಡ್ ನಾಯಕರ ನಾಲ್ಕನೇ ಶೃಂಗಸಭೆಯ ಸಮ್ಮೇಳನವನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಯೋಜಿಸಿದ್ದಾರೆ. ಇದಾದ ಬಳಿಕ ಸೆಪ್ಟೆಂಬರ್ 22ರಂದು ಅಂದರೆ ನಾಳೆ ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ. ನಂತರ ಮೋದಿ ಅವರು ತಮ್ಮ ಪ್ರವಾಸದ ಕೊನೆಯ ದಿನವಾದ ಸೆಪ್ಟೆಂಬರ್ 23 ರಂದು ವಿಶ್ವಸಂಸ್ಥೆಯ ‘ಭವಿಷ್ಯದ ಶೃಂಗಸಭೆ’ಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಉಕ್ರೇನ್ ಯುದ್ಧ ಮತ್ತು ಆ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜೋ ಬೈಡನ್ ಚರ್ಚಿಸಲಿದ್ದಾರೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಅವರು ಹೇಳಿದ್ದಾರೆ.