ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಒಂದೆಡೆ ಭಾರತದ ರಫ್ತಿನ ಮೇಲೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸುವ ಮೂಲಕ ಸಂಬಂಧ ಹದಗೆಟ್ಟಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಮುನೀರ್ ಮತ್ತೆ ಅಮೆರಿಕಕ್ಕೆ ತೆರಳುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಭಾರತ ಜೊತೆಗಿನ ನಾಲ್ಕು ದಿನಗಳ ಸೇನಾ ಸಂಘರ್ಷದ ನಂತರ ಅವರು ಇದೇ ವಾರ ಎರಡನೇ ಬಾರಿಗೆ ವಾಷಿಂಗ್ಟನ್ ಗೆ ತೆರಳಲಿದ್ದು, ಅಲ್ಲಿನ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ.
ಈ ಹಿಂದೆ ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ಐದು ದಿನಗಳ ಭೇಟಿ ನೀಡಿದ್ದ ಮುನೀರ್ ಗೆ ಡೊನಾಲ್ಡ್ ಟ್ರಂಪ್ ಭರ್ಜರಿ ಆತಿಥ್ಯ ನೀಡಿ ಕಳುಹಿಸಿದ್ದರು. ತೈಲ ಒಪ್ಪಂದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಮೆರಿಕ- ಪಾಕಿಸ್ತಾನ ಸಹಕಾರ ವೃದ್ಧಿಯ ಘೋಷಣೆಯೊಂದಿಗೆ ಈ ಸಭೆ ಅಂತ್ಯವಾಗಿತ್ತು.
ಅಮೆರಿಕದ ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆಗಾಗಿ ಮುನೀರ್ ಈ ವಾರ ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮುಖ್ಯಸ್ಥ ಜನರಲ್ ಮೈಕೆಲ್ ಎರಿಕ್ ಕುರಿಲ್ಲಾ ಜುಲೈ ತಿಂಗಳ ಕೊನೆಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಮುನೀರ್ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಮೂಲಗಳು ಪತ್ರಿಕೆಗೆ ತಿಳಿಸಿವೆ ಎನ್ನಲಾಗಿದೆ.
ಮುನೀರ್ ಭೇಟಿ ಕುರಿತು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಅಥವಾ ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಆದರೆ ಅವರು ಈ ಹಿಂದಿನ ಭೇಟಿ ವೇಳೆಯಲ್ಲಿ ರಾಷ್ಟ್ರದ ಮುಖ್ಯಸ್ಥರಿಗೆ ನೀಡುವಂತೆ ಡೊನಾಲ್ಡ್ ಟ್ರಂಪ್ ಭರ್ಜರಿ ಆತಿಥ್ಯ ನೀಡುವ ಮೂಲಕ ಈ ವರ್ಷದಲ್ಲಿ ಮತ್ತೊಮ್ಮೆ ಅಮೆರಿಕಕ್ಕೆ ಭೇಟಿ ನೀಡುವ ಸುಳಿವು ನೀಡಿದ್ದರು.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಸೇನಾ ಸಂಘರ್ಷ ನಡೆದ ವಾರದಲ್ಲಿಯೇ ಮುನೀರ್ ಅವರ ಅಮೆರಿಕ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು
ಮೇ 2011 ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ನಡೆದ ರಹಸ್ಯ ಕಾರ್ಯಾಚರಣೆಯಲ್ಲಿ ಯುಎಸ್ ಪಡೆಗಳು ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದ ನಂತರ ಯುಎಸ್ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟಿದ್ದವು.