ಮಾಸ್ಕೋ: ಉಕ್ರೇನ್-ರಷ್ಯಾ ನಡುವಿನ ಸಂಘರ್ಷವನ್ನು ಕೊನೆಗಾಣಿಸುವ ಸಲುವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರ್ಂಪ್ ಮತ್ತು ರಷ್ಟಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಲಾಸ್ಕದಲ್ಲಿ ನಡೆದ ಸಭೆಯು ಕೊನೆಗೊಂಡಿದ್ದು, ಪುಟಿನ್ ಅವರ ಅಂಗರಕ್ಷಕರು ಮಲ ತ್ಯಾಜ್ಯವನ್ನು ಸಂಗ್ರಹಿಸಲು 'ಮಲ ಸೂಟ್‌ಕೇಸ್' (poop suitcase) ಅನ್ನು ಹೊತ್ತೊಯ್ದಿದ್ದರು ಎಂದು ದಿ ಎಕ್ಸ್‌ಪ್ರೆಸ್ ಯುಎಸ್ ವರದಿ ಮಾಡಿದೆ.
ವಿದೇಶಿ ಶಕ್ತಿಗಳು ರಷ್ಯಾದ ಅಧ್ಯಕ್ಷನ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವುದನ್ನು ತಡೆಯಲು ಈ ಅಸಾಮಾನ್ಯ ಭದ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. 'ವಿದೇಶಗಳಿಗೆ ಪುಟಿನ್ ಪ್ರಯಾಣಿಸಿದಾಗ ಅಂಗರಕ್ಷಕರು ಅವರ ಮಲ ತ್ಯಾಜ್ಯವನ್ನು ಸಂಗ್ರಹಿಸಿ ರಷ್ಯಾಕ್ಕೆ ತರುತ್ತಾರೆ' ಎಂದು ದಿ ಎಕ್ಸ್‌ಪ್ರೆಸ್ ಯುಎಸ್ ವರದಿ ಮಾಡಿದೆ.
ಪುಟಿನ್ ಅಲಾಸ್ಕ ಭೇಟಿಯ ಸಮಯದಲ್ಲಿಯೂ, ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅವರನ್ನು ಅಂಗರಕ್ಷಕರು ಸುತ್ತುವರೆದಿದ್ದರು. ಪುಟಿನ್ ಅವರನ್ನು ಮತ್ತು ರಷ್ಯಾದ ಗುಪ್ತಚರ ಇಲಾಖೆಯನ್ನು ರಕ್ಷಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದರು.
ಫ್ರೆಂಚ್‌ನ ಪ್ಯಾರಿಸ್ ಮ್ಯಾಚ್‌ನ ತನಿಖಾ ಪತ್ರಕರ್ತರಾದ ರೆಗಿಸ್ ಗೆಂಟೆ ಮತ್ತು ಮಿಖಾಯಿಲ್ ರೂಬಿನ್ ಅವರ ಹೇಳಿಕೆ ಉಲ್ಲೇಖಿಸಿ ದಿ ಎಕ್ಸ್‌ಪ್ರೆಸ್ ಯುಎಸ್ ಮಾಡಿರುವ ವರದಿ ಪ್ರಕಾರ, ರಷ್ಯಾದ ಅಧ್ಯಕ್ಷರ ಫೆಡರಲ್ ಪ್ರೊಟೆಕ್ಷನ್ ಸರ್ವಿಸ್ (ಎಫ್‌ಪಿಎಸ್) ಸದಸ್ಯರು ಅವರ ಮಲ ಸೇರಿದಂತೆ ಮಾನವ ತ್ಯಾಜ್ಯವನ್ನು ವಿಶೇಷ ಚೀಲಗಳಲ್ಲಿ ಸಂಗ್ರಹಿಸಿ, ಮೀಸಲಾದ ಬ್ರೀಫ್‌ಕೇಸ್‌ಗಳಲ್ಲಿ ಸಾಗಿಸುತ್ತಾರೆ.
ಈ ಕ್ರಮವು ಹಲವು ವರ್ಷಗಳ ಹಿಂದಿನದಾಗಿದ್ದು, ಪುಟಿನ್ ಅವರು 2017ರ ಮೇನಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದಾಗಲೂ ಇದನ್ನೇ ಅನುಸರಿಸಲಾಗಿತ್ತು ಎಂದು ದಿ ಎಕ್ಸ್‌ಪ್ರೆಸ್ ಯುಎಸ್ ವರದಿ ಮಾಡಿದೆ. ರಷ್ಯಾದ ನಾಯಕನ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿರುವುದರಿಂದ ವಿದೇಶಿ ಶಕ್ತಿಗಳು ಪುಟಿನ್ ಅವರ ಮಾನವ ತ್ಯಾಜ್ಯದ ಮಾದರಿಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಈ ಅಚ್ಚರಿಯ ಭದ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಶಂಕಿಸಲಾಗಿದೆ.
ಪುಟಿನ್ ವಿಯೆನ್ನಾಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಪೋರ್ಟಬಲ್ ಶೌಚಾಲಯ ಬಳಸುತ್ತಿದ್ದರು. 1999 ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾದಾಗಿನಿಂದಲೂ ಪುಟಿನ್ ಈ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ ಎಂದು ಮೂಲವೊಂದು ಬಹಿರಂಗಪಡಿಸಿದೆ ಎಂದು ಪತ್ರಕರ್ತೆ ಫರಿದಾ ರುಸ್ತಮೋವಾ ಹೇಳಿರುವುದಾಗಿ ದಿ ಎಕ್ಸ್‌ಪ್ರೆಸ್ ಯುಎಸ್ ವರದಿ ಮಾಡಿದೆ.
72 ವರ್ಷದ ಪುಟಿನ್ ಅವರ ಆರೋಗ್ಯದ ಬಗ್ಗೆ ಎದ್ದಿರುವ ಊಹಾಪೋಹಗಳ ಮಧ್ಯೆ ಈ ವರದಿಗಳು ಬಂದಿವೆ. ಕಳೆದ ನವೆಂಬರ್‌ನಲ್ಲಿ ಕಜಕಿಸ್ತಾನದ ಅಸ್ತಾನಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪುಟಿನ್ ತಮ್ಮ ಕಾಲುಗಳನ್ನು ಎಳೆದುಕೊಂಡು ಹೋಗುತ್ತಿರುವಂತೆ ಕಂಡುಬಂದ ನಂತರ ಕಳವಳ ವ್ಯಕ್ತವಾಗಿದೆ. 'ಇದು ಪಾರ್ಕಿನ್ಸನ್ ಕಾಯಿಲೆಯಂತಹ ನರವೈಜ್ಞಾನಿಕ ಸ್ಥಿತಿಯಾಗಿರಬಹುದು ಎಂದು ಡಾ. ಬಾಬ್ ಬೆರೂಖಿಮ್ ಅನುಮಾನ ವ್ಯಕ್ತಪಡಿಸಿದ್ದಾರೆ' ದಿ ಎಕ್ಸ್‌ಪ್ರೆಸ್ ಯುಎಸ್ ವರದಿಯಲ್ಲಿ ಹೇಳಿದೆ.
2023ರಲ್ಲಿ ಬೆಲರೂಸಿಯನ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರನ್ನು ಭೇಟಿಯಾದಾಗಲೂ ಪುಟಿನ್ ತಾವು ಕುಳಿತಲ್ಲಿಯೇ ಅಲುಗಾಡುತ್ತಿರುವುದು ಕಂಡುಬಂದಿತ್ತು. 2022 ರಲ್ಲಿ, ಜನರಲ್ ಎಸ್‌ವಿಆರ್ ಎಂಬ ಟೆಲಿಗ್ರಾಮ್ ಚಾನೆಲ್‌ನಲ್ಲಿಯೂ ಪುಟಿನ್ ಆರೋಗ್ಯದ ಬಗ್ಗೆ ವದಂತಿಗಳು ಹರಡಿದ್ದವು. ಆದರೆ, ಕ್ರೆಮ್ಲಿನ್ ಆ ವದಂತಿಗಳನ್ನು ನಿರಾಕರಿಸಿತು ಮತ್ತು ಮುಚ್ಚಿಹಾಕಲು ಪ್ರಯತ್ನಿಸಿತು.