ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷವನ್ನು ಕೊನೆಗೊಳಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಮಂಗಳವಾರ ಮತ್ತೊಮ್ಮೆ ಹೇಳಿದ್ದಾರೆ.
ನಮ್ಮ ಅಧ್ಯಕ್ಷರು ಅಮೆರಿಕದ ಶಕ್ತಿಯನ್ನು ಬಳಸಿಕೊಂಡು ನಮ್ಮ ಮಿತ್ರರಾಷ್ಟ್ರಗಳು, ನಮ್ಮ ಸ್ನೇಹಿತರು ಹಾಗೂ ಪ್ರಪಂಚದಾದ್ಯಂತ ವಿರೋಧಿಗಳಿಂದ ಗೌರವ ಕೋರುತ್ತಿದ್ದಾರೆ ಎಂದು ಲೀವಿಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧ ಕೊನೆಗೊಳಿಸಲು ಟ್ರಂಪ್ ತೀವ್ರ ಒತ್ತಡ ಹೇರಿದ್ದಾರೆ. ನೀವು ನೋಡಿದಂತೆ ಭಾರತದ ಮೇಲೆ ನಿರ್ಬಂಧಗಳು ಮತ್ತು ಇತರ ಕ್ರಮಗಳನ್ನು ಅವರು ತೆಗೆದುಕೊಂಡಿದ್ದಾರೆ ಎಂದು ಲೀವಿಟ್ ಹೇಳಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಲೀವಿಟ್, ಭಾರತ-ಪಾಕಿಸ್ತಾನ ಸಂಘರ್ಷವನ್ನು ಕೊನೆಗೊಳಿಸಲು ಟ್ರಂಪ್, ಹೆಚ್ಚು ಸುಂಕ ವಿಧಿಸುವುದನ್ನು ಅತ್ಯಂತ ಶಕ್ತಿಯುತ ರೀತಿಯಲ್ಲಿ ಬಳಸಿಕೊಂಡರು ಎಂದು ತಿಳಿಸಿದರು.
ಮೇ 10 ರಂದು, ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ರಾತ್ರಿಯ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಪರಿಹರಿಸಲು ನಾನು ಸಹಾಯ ಮಾಡಿದ್ದೇನೆ ಎಂದು ಟ್ರಂಪ್ 40ಕ್ಕೂ ಹೆಚ್ಚು ಬಾರಿ ಹೇಳಿಕೆ ನೀಡಿದ್ದಾರೆ.
ಆದರೆ ಭಾರತ ಟ್ರಂಪ್ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸುವ ಬಗ್ಗೆ ಎರಡು ದೇಶಗಳ ಸೇನಾ ಮಹಾನಿರ್ದೇಶಕರ (DGMO) ನಡುವಿನ ನೇರ ಮಾತುಕತೆ ನಂತರ ಕದನ ವಿರಾಮ ಮಾಡಿಕೊಳ್ಳಲಾಯಿತು ಎಂದು ಭಾರತ ನಿರಂತರವಾಗಿ ಹೇಳುತ್ತಿದೆ.