ಮಾಸ್ಕೋ: ಅಮೆರಿಕದಲ್ಲಿ ವಲಸಿಗರಿಗೆ ಉದ್ಯೋಗ ಕಡಿತವಾಗುತ್ತಿರುವಂತೆಯೇ ರಷ್ಯಾದ ಕಂಪನಿಗಳು ವಿಶೇಷವಾಗಿ ಯಂತ್ರೋಪಕರಣ ಮತ್ತು ಎಲೆಕ್ಟ್ರಾನಿಕ್ ವಲಯದಲ್ಲಿ ಭಾರತೀಯ ಪ್ರಜೆಗಳ ನೌಕರರ ಹೆಚ್ಚಳಕ್ಕೆ ಆಸಕ್ತಿ ತೋರುತ್ತಿವೆ ಎಂದು ರಷ್ಯಾದ ಭಾರತೀಯ ರಾಯಭಾರಿ ವಿನಯ್ ಕುಮಾರ್ ಹೇಳಿದ್ದಾರೆ.
TASS ರಾಜ್ಯ ನ್ಯೂಸ್ ಏಜೆನ್ಸಿಯೊಂದಿಗೆ ಮಾತನಾಡಿದ ಅವರು, ರಷ್ಯಾದಲ್ಲಿ ಹೆಚ್ಚು ಹೆಚ್ಚು ಭಾರತೀಯರು ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುತ್ತಿರುವುದರಿಂದ ಕಾನ್ಸುಲರ್ ಸೇವೆಗಳ ಕೆಲಸದ ಹೊರೆ ಹೆಚ್ಚುತ್ತಿದೆ ಎಂದಿದ್ದಾರೆ.
ಅಮೆರಿಕ, ಕೆನಡಾ ಮತ್ತು ಇಂಗ್ಲೆಂಡ್ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಲಸಿಗರ ಉದ್ಯೋಗಕ್ಕೆ ಕಡಿತ ಹೆಚ್ಚಾಗಿರುವಂತೆಯೇ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ.
ರಷ್ಯಾದಲ್ಲಿ ಮಾನವ ಸಂಪನ್ಮೂಲದ ಅಗತ್ಯವಿದ್ದು, ಭಾರತದಲ್ಲಿ ಕೌಶಲ್ಯಯುತ ಮಾನವ ಸಂಪನ್ಮೂಲ ಇದೆ. ಹೀಗಾಗಿ ಪ್ರಸ್ತುತ ರಷ್ಯಾದಲ್ಲಿನ ಕಾನೂನು, ನಿಯಮಗಳು ಮತ್ತು ಮೀಸಲಾತಿ ಅಡಿಯಲ್ಲಿ ಅಲ್ಲಿನ ಕಂಪನಿಗಳು ಭಾರತೀಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುತ್ತಿವೆ ಎಂದು ಭಾರತೀಯ ರಾಯಭಾರಿ ತಿಳಿಸಿದ್ದಾರೆ.
ಇಲ್ಲಿಗೆ ಬಂದಿರುವ ಬಹುತೇಕ ಜನರು ನಿರ್ಮಾಣ ಮತ್ತು ಜವಳಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಯಂತ್ರೋಪಕರಣ ಮತ್ತು ಎಲೆಕ್ಟ್ರಾನಿಕ್ ವಲಯದಲ್ಲಿ ಭಾರತೀಯರ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ರಾಯಭಾರಿಗಳ ಕೆಲಸದ ಹೊರೆ ಹೆಚ್ಚಾಗುತ್ತಿದೆ.
ಇಲ್ಲಿಗೆ ಬರುವ ಮತ್ತು ನಿರ್ಗಮಿಸುವ ಭಾರತೀಯರು ಪಾಸ್ ಪೋರ್ಟ್, ಜನನ ಪ್ರಮಾಣ ಪತ್ರ, ಪಾಸ್ ಪೋರ್ಟ್ ಕಳೆದುಕೊಂಡಲ್ಲಿ ಕಾನ್ಸಲರ್ ಸೇವೆಯನ್ನು ಬಯಸುತ್ತಾರೆ. ಭಾರತೀಯ ವಿದೇಶಾಂಗ ನೀತಿಯಲ್ಲಿ ರಷ್ಯಾ ಪ್ರಮುಖ ಮಿತ್ರ ರಾಷ್ಟ್ರವಾಗಿದ್ದು, ಧೀರ್ಘಕಾಲದಿಂದ ಭಾರತದ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ ಎಂದು ಅವರು ಹೇಳಿದ್ದಾರೆ.
ರಷ್ಯಾಕ್ಕೆ ತೆರಳುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ: ರಷ್ಯಾಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಕಾರ್ಮಿಕರು ಸಂಖ್ಯೆಯಲ್ಲೂ ಗಮನಾರ್ಹ ರೀತಿಯಲ್ಲಿ ಹೆಚ್ಚಾಗುತ್ತಿದೆ. ಭಾರತೀಯ ರಾಯಭಾರಿಗಳ ಡೇಟಾ ಪ್ರಕಾರ, ಅಂದಾಜು 14,000 ಭಾರತೀಯರು ರಷ್ಯಾದಲ್ಲಿದ್ದಾರೆ. ಅಲದ್ದೇ ಸುಮಾರು 1,500 ಭಾರತೀಯ ಮೂಲದ ಅಪ್ಘನ್ ಜನರು ರಷ್ಯಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.