ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯದ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದು, ಕಳೆದ ಕೆಲವು ದಿನಗಳಿಂದ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಶನಿವಾರ ಬಹು ಹೊತ್ತು ಗಾಲ್ಫ್ ಕೋರ್ಸ್‌ನಲ್ಲಿಯೇ ಕಳೆದಿದ್ದಾರೆ ಎಂದು ದಿ ಹಿಲ್ ವರದಿ ಮಾಡಿದೆ.
ಅಧಿಕೃತವಾಗಿ ಕಳೆದ ಕೆಲವು ದಿನಗಳಿಂದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಟ್ರಂಪ್, ವರ್ಜೀನಿಯಾದ ಸ್ಟರ್ಲಿಂಗ್‌ನಲ್ಲಿರುವ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿನ ಶ್ವೇತಭವನದ ಕ್ಯಾಬಿನೆಟ್ ಸಭೆಯಲ್ಲಿ ಅವರ ಕೈಯಲ್ಲಿ ಮೂಗೇಟುಗಳನ್ನು ತೋರಿಸುವ ಫೋಟೋ ವೈರಲ್ ಆಗಿತ್ತು. ಇದರ ಬಗ್ಗೆಯೂ ನೆಟ್ಟಿಗರು ಸಾಕಷ್ಟು ಚರ್ಚೆ ನಡೆಸಿದ್ದಾರೆ.
ಹಿರಿಯ ಪತ್ರಕರ್ತೆ ಲಾರಾ ರೋಜೆನ್ ಅವರು ಶನಿವಾರ, ವರ್ಜೀನಿಯಾ ಗಾಲ್ಫ್ ಕ್ಲಬ್‌ನಲ್ಲಿರುವ ಟ್ರಂಪ್ ಅವರ ಹೊಸ ಫೋಟೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ದಿ ಹಿಲ್ ವರದಿ ಮಾಡಿದೆ.
ಈ ವಾರದ ಆರಂಭದಲ್ಲಿ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಅವರು ಸಂದರ್ಶನವೊಂದರಲ್ಲಿ, ಅಗತ್ಯವಿದ್ದರೆ ನಾನು ರಾಷ್ಟ್ರ ಅಧ್ಯಕ್ಷನ ಸ್ಥಾನ ನಿರ್ವಹಿಸಲು ಸಿದ್ಧನಿದ್ದೇನೆ. ಆದರೆ ಅಧ್ಯಕ್ಷ ಟ್ರಂಪ್ ಆರೋಗ್ಯ ಉತ್ತಮವಾಗಿದ್ದು, ಉಳಿದ ಅವಧಿಯ ಸೇವೆಯನ್ನು ಪೂರೈಸುತ್ತಾರೆ. ಅಮೆರಿದ ಜನರಿಗೆ ಒಳ್ಳೆಯ ಕೆಲಸ ಮಾಡ್ತಾರೆ ಎಂದು ಹೇಳಿದ್ದರು.
ಟ್ರಂಪ್ ಅವರು ಜನವರಿಯಲ್ಲಿ 79ನೇ ವಯಸ್ಸಿನಲ್ಲಿ ಮತ್ತೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಅತ್ಯಂತ ಹಿರಿಯ ಅಮೆರಿಕದ ಅಧ್ಯಕ್ಷ ಎನಿಸಿಕೊಂಡಿದ್ದರು. ಕಳೆದ ತಿಂಗಳು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸುದ್ದಿಗೋಷ್ಠಿ ವೇಳೆ ಟ್ರಂಪ್ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ದೃಢಪಡಿಸಿದಾಗ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡಿತ್ತು.