ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನ ಕ್ರೂರ ಆಡಳಿತದಿಂದ ಜನತೆ ಪರಿತಪಿಸುವಂತಾಗಿದೆ. ಒಂದು ಕುಟುಂಬದ 13 ಜನರನ್ನು ಕೊಂದ ಹಂತಕನನ್ನು ಅದೇ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕನಿಂದ ಗುಂಡಿಟ್ಟು ಹತ್ಯೆ ಮಾಡಿಸಿದೆ.
ಅಫ್ಘಾನ್ ಸುಪ್ರೀಂ ಕೋರ್ಟ್ ಆದೇಶ ಮತ್ತು ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್‌ಜಾದಾ ಅನುಮೋದಿಸಿದ ಸಾರ್ವಜನಿಕ ಮರಣದಂಡನೆಯನ್ನು ಸುಮಾರು 80,000 ಜನರು ವೀಕ್ಷಿಸಿದ್ದಾರೆ.
ಅಬ್ದುಲ್ ರೆಹಮಾನ್, ಆತನ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 13 ಜನರನ್ನು ಕೊಂದ ಅಪರಾಧಕ್ಕಾಗಿ ಮಂಗಲ್ ಎಂಬ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗಿದೆ. ಈ ಆದೇಶವನ್ನು ಅಫ್ಗಾನಿಸ್ತಾನದ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಜಾದಾ ಅನುಮೋದಿಸಿದ್ದಾರೆ.
ಸಂತ್ರಸ್ತರ ಕುಟುಂಬಕ್ಕೆ ಕ್ಷಮೆ ಮತ್ತು ಶಿಕ್ಷೆಯ ಆಯ್ಕೆಯನ್ನು ನೀಡಲಾಗಿತ್ತು. ಆದರೆ, ಸಂತ್ರಸ್ತ ಕುಟುಂಬ ಕಿಸಾಸ್‌ಗೆ (‘ಕಣ್ಣಿಗೆ ಕಣ್ಣು’ ಎಂಬ ಇಸ್ಲಾಮಿಕ್ ತತ್ವ) ಒತ್ತಾಯಿಸಿದ ನಂತರ, ಮರಣದಂಡನೆ ಆದೇಶ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದರಂತೆ ಸಂತ್ರಸ್ತರ ಕುಟುಂಬದ ಸಂಬಂಧಿ 13 ವರ್ಷದ ಬಾಲಕನಿಂದ ಶಿಕ್ಷೆ ಕೊಡಿಸಲಾಗಿದ್ದು, ಬಾಲಕ ಮಂಗಲ್‌ಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ.
ಮೊದಲಿಗೆ ಕೊಲೆಗಾರನನ್ನು ಮೈದಾನಕ್ಕೆ ಕರೆತರಲಾಗಿದ್ದು, ನಂತರ ವೈದ್ಯರು ತಪಾಸಣೆ ನಡೆಸಿದ್ದಾರೆ. ಬಳಿಕ, ಷರಿಯಾ ಕಾನೂನಿನ ಪ್ರಕಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಅಫ್ಗಾನ್ ವರದಿಗಳ ಪ್ರಕಾರ, ತಾಲಿಬಾನ್ ಅಧಿಕಾರಿಗಳು ಮತ್ತು ಸಂತ್ರಸ್ತರ ಕುಟುಂಬ ಸೇರಿದಂತೆ ಸುಮಾರು 80,000 ಜನರು ಸಾರ್ವಜನಿಕ ಮರಣದಂಡನೆಯನ್ನು ವೀಕ್ಷಿಸಿದರು.
ಈ ನಡುವೆ ಘಟನೆಗೆ ವಿಶ್ವಸಂಸ್ಥೆಯ ವಿಶೇಷ ವರದಿಗಾರ ರಿಚರ್ಡ್ ಬೆನೆಟ್ ಪ್ರತಿಕ್ರಿಯಿಸಿದ್ದು, ಇದು ಅಮಾನವೀಯ, ಕ್ರೂರ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ" ಎಂದು ಖಂಡಿಸಿದ್ದಾರೆ.