ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಅಮೆರಿಕದ ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರ ಕಚೇರಿಯ ಐತಿಹಾಸಿಕ ಆಫೀಸ್ ಟೇಬಲ್ ಅನ್ನು ಬದಲಾಯಿಸಿದ್ದಾರೆ.
ಹೌದು.. ವೈಟ್ ಹೌಸ್ ನ ಅಮೆರಿಕ ಅಧ್ಯಕ್ಷರ ಕಚೇರಿಯಲ್ಲಿದ್ದ ರೆಸಲ್ಯೂಟ್ ಡೆಸ್ಕ್ ಅನ್ನು ಡೊನಾಲ್ಡ್ ಟ್ರಂಪ್ ಬದಲಿಸಿದ್ದಾರೆ. ಇದು ಸಾಮಾನ್ಯ ಟೇಬಲ್ ಆಗಿದಿದ್ದರೆ ಸುದ್ದಿಯಾಗುತ್ತಿರಲಿಲ್ಲ.. ಆದರೆ ಅದು ಸುಮಾರು 145 ವರ್ಷಗಳ ಸುದೀರ್ಘ ಇತಿಹಾಸವಿದ್ದ ಟೇಬಲ್ ಅಂತೆ.
ಎಲಾನ್ ಮಸ್ಕ್ ಮಕ್ಕಳು ಕಾರಣ!
ಇಷ್ಟಕ್ಕೂ ಅಷ್ಠು ಸುದೀರ್ಘ ಇತಿಹಾಸವಿದ್ದ ಟೇಬಲ್ ಅನ್ನು ಟ್ರಂಪ್ ಬದಲಿಸಲು ಉದ್ಯಮಿ ಎಲಾನ್ ಮಸ್ಕ್ ಮಕ್ಕಳು ಕಾರಣವಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಹರಿದಾಡುತ್ತಿವೆ. ಇತ್ತೀಚೆಗೆ ಎಲಾನ್ ಮಸ್ಕ್ ಅಧ್ಯಕ್ಷರ ಕಚೇರಿಗೆ ತಮ್ಮ ಮಕ್ಕಳನ್ನು ಕರೆತಂದಿದ್ದರು.
ಈ ವೇಳೆ ಮಸ್ಕ್ ಅವರ ಮಗ ಟ್ರಂಪ್ ಕುರ್ಚಿ ಪಕ್ಕದಲ್ಲೇ ಕುಳಿತು ಏನೇನೋ ಮಾತನಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅದೇ ಸಂದರ್ಭದಲ್ಲಿ ಮಸ್ಕ್ ಮಗ ಮೂಗಿಗೆ ಬೆರಳು ಹಾಕಿ ಟೇಬಲ್ ಗೆ ಒರೆಸುತ್ತಿದ್ದನಂತೆ. ಇದೇ ಕಾರಣಕ್ಕೆ ಟ್ರಂಪ್ ಐತಿಹಾಸಿಕ ಟೇಬಲ್ ಅನ್ನೇ ಬದಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಅಧ್ಯಕ್ಷರ ಕಚೇರಿಯಲ್ಲಿನ ಟೇಬಲ್ ಬದಲಾವಣೆ ಕುರಿತು ವೈಟ್ ಹೌಸ್ ಅಧಿಕಾರಿಗಳು ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಟ್ರಂಪ್ ಟೇಬಲ್ ಬದಲಾವಣೆಗೂ ಎಲಾನ್ ಮಸ್ಕ್ ಪುತ್ರ ಈ ಕೆಲಸಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ.
ಟ್ರಂಪ್ ಹೇಳಿದ್ದೇನು?
ಟೇಬಲ್ ಬದಲಾವಣೆ ವಿಚಾರ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಇದೇ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, 'ಅಧ್ಯಕ್ಷರ ಆಯ್ಕೆ ಹಕ್ಕಿನಂತೆ ನಾನು ಮಾಜಿ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಮತ್ತು ಇತರರು ಬಳಸುತ್ತಿದ್ದ ಡೆಸ್ಕ್ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
'ಚುನಾವಣೆಯ ನಂತರ, ಅಧ್ಯಕ್ಷರಿಗೆ 7 ಡೆಸ್ಕ್‌ಗಳಲ್ಲಿ 1 ಆಯ್ಕೆ ಸಿಗುತ್ತದೆ. ಮಾಜಿ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಮತ್ತು ಇತರರು ಬಳಸುತ್ತಿದ್ದ ಮತ್ತು ಬಹಳ ಪ್ರಸಿದ್ಧವಾಗಿರುವ "ಸಿ & ಒ" ಡೆಸ್ಕ್ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇದನ್ನು ತಾತ್ಕಾಲಿಕವಾಗಿ ಶ್ವೇತಭವನದಲ್ಲಿ ಸ್ಥಾಪಿಸಲಾಗಿದೆ. ಅಂತೆಯೇ ಈ ಹಿಂದೆ ಇದ್ದ ರೆಸಲ್ಯೂಟ್ ಡೆಸ್ಕ್ ಅನ್ನು ಕೊಂಚ ನವೀಕರಿಸಲಾಗುತ್ತಿದೆ. ಇದು ಬಹಳ ಮುಖ್ಯವಾದ ಕೆಲಸ. ಇದು ಸುಂದರವಾದ, ಆದರೆ ತಾತ್ಕಾಲಿಕ ಬದಲಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ರೆಸಲ್ಯೂಟ್ ಡೆಸ್ಕ್ ವಿಶೇಷತೆ ಮತ್ತು ಇತಿಹಾಸ
ರೆಸೊಲ್ಯೂಟ್ ಡೆಸ್ಕ್ ಅನ್ನು 1880ರಲ್ಲಿ ರಾಣಿ ವಿಕ್ಟೋರಿಯಾ ಅಧ್ಯಕ್ಷ ರುದರ್ಫೋರ್ಡ್ ಬಿ. ಹೇಯ್ಸ್ ಅವರಿಗೆ "ಸದ್ಭಾವನೆ ಮತ್ತು ಸ್ನೇಹ" ದ ಸಂಕೇತವಾಗಿ ಉಡುಗೊರೆಯಾಗಿ ನೀಡಿದ್ದರು. ಇದನ್ನು ಬ್ರಿಟಿಷ್ ಹಡಗಿನ H.M.S. ರೆಸೊಲ್ಯೂಟ್ ನ ಓಕ್ ಮರಗಳನ್ನು ಬಳಸಿ ತಯಾರಿಸಲಾಗಿತ್ತು.
ಶ್ವೇತಭವನದ ಪ್ರಕಾರ, ಲಿಂಡನ್ ಬಿ. ಜಾನ್ಸನ್, ರಿಚರ್ಡ್ ನಿಕ್ಸನ್ ಮತ್ತು ಜೆರಾಲ್ಡ್ ಫೋರ್ಡ್ (1964 ರಿಂದ 1977 ರವರೆಗೆ) ಹೊರತುಪಡಿಸಿ, ರುದರ್ಫೋರ್ಡ್ ಬಿ. ಹೇಯ್ಸ್ ನಂತರ ಎಲ್ಲಾ ಅಧ್ಯಕ್ಷರು ಇದೇ ಡೆಸ್ಕ್ ಅನ್ನು ಬಳಸುತ್ತಿದ್ದರು. ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಕೋರಿಕೆಯ ಮೇರೆಗೆ 1961 ರಲ್ಲಿ ಓವಲ್ ಕಚೇರಿಯಲ್ಲಿ ರೆಸೊಲ್ಯೂಟ್ ಡೆಸ್ಕ್ ಅನ್ನು ಮೊದಲು ಬಳಸಲಾಗಿತ್ತು.