ನವದೆಹಲಿ: ಅಮೆರಿಕಾದ ಸುಂಕ ಹೆಚ್ಚಳ ಬೆದರಿಕೆಗೆ ಸಡ್ಡು ಹೊಡೆಯಲು ಮುಂದಾಗಿರುವ ಭಾರತ ತಾನೂ ಪ್ರತಿ ಸುಂಕ ವಿಧಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
ಸುರಕ್ಷತಾ ಕ್ರಮಗಳ ಹೆಸರಿನಲ್ಲಿ ಅಮೆರಿಕ ಆಟೋಮೊಬೈಲ್ ವಲಯದ ಮೇಲೆ ಸುಂಕ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ ಅಮೆರಿಕ ವಿರುದ್ಧ WTO ಮಾನದಂಡಗಳ ಅಡಿಯಲ್ಲಿ ಪ್ರತೀಕಾರದ ಸುಂಕಗಳನ್ನು ವಿಧಿಸಲು ಭಾರತ ಶುಕ್ರವಾರ ಪ್ರಸ್ತಾಪಿಸಿದೆ.
"ರಿಯಾಯತಿಗಳು ಅಥವಾ ಇತರ ಬಾಧ್ಯತೆಗಳನ್ನು ರದ್ದುಗೊಳಿಸುವ ಪ್ರಸ್ತಾವನೆ ಅಮೆರಿಕದಲ್ಲಿ ತಯಾರಾಗುವ ಆಯ್ದ ಉತ್ಪನ್ನಗಳ ಮೇಲಿನ ಸುಂಕಗಳ ಹೆಚ್ಚಳದ ರೂಪವನ್ನು ತೆಗೆದುಕೊಳ್ಳುತ್ತದೆ" ಎಂದು ಭಾರತದ ಕೋರಿಕೆಯ ಮೇರೆಗೆ ಪ್ರಸಾರವಾಗುತ್ತಿರುವ WTO ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೆಲವು WTO ನಿಬಂಧನೆಗಳ ಅಡಿಯಲ್ಲಿ ರಿಯಾಯಿತಿಗಳು ಮತ್ತು ಇತರ ಬಾಧ್ಯತೆಗಳ ಪ್ರಸ್ತಾವಿತ ಅಮಾನತು ಕುರಿತು ಭಾರತ WTO ಯ ಸರಕುಗಳ ವ್ಯಾಪಾರ ಮಂಡಳಿಗೆ ತಿಳಿಸಿದೆ.
"ಭಾರತದಿಂದ ಆಟೋಮೊಬೈಲ್ ಭಾಗಗಳ ಆಮದಿನ ಮೇಲೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ವಿಸ್ತರಿಸಿದ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಈ ಅಧಿಸೂಚನೆಯನ್ನು ಮಾಡಲಾಗಿದೆ" ಎಂದು WTO ಹೇಳಿದೆ.
ಈ ವರ್ಷ ಮಾರ್ಚ್ 26 ರಂದು, ಪ್ರಯಾಣಿಕ ವಾಹನಗಳು ಮತ್ತು ಲಘು ಟ್ರಕ್‌ಗಳ ಆಮದಿನ ಮೇಲೆ ಮತ್ತು ಭಾರತದಿಂದ ಕೆಲವು ಆಟೋಮೊಬೈಲ್ ಭಾಗಗಳ ಮೇಲೆ ಶೇಕಡಾ 25 ರಷ್ಟು ಮೌಲ್ಯದ ಸುಂಕ ಹೆಚ್ಚಳದ ರೂಪದಲ್ಲಿ ಅಮೆರಿಕ ಸುರಕ್ಷತಾ ಕ್ರಮವನ್ನು ಅಳವಡಿಸಿಕೊಂಡಿದೆ. ಈ ಕ್ರಮಗಳು ಮೇ 3, 2025 ರಿಂದ ಅನ್ವಯಿಸುತ್ತವೆ ಮತ್ತು ಅನಿಯಮಿತ ಅವಧಿಗೆ ವಿಸ್ತರಿಸುತ್ತವೆ. ಈ ಕ್ರಮಗಳನ್ನು ಅಮೆರಿಕ WTO ಗೆ ತಿಳಿಸಿಲ್ಲ, ಆದರೆ ಅವು ಮೂಲಭೂತವಾಗಿ ಸುರಕ್ಷತಾ ಕ್ರಮಗಳಾಗಿವೆ.
ಈ ಸುಂಕಗಳು ಜಾರಿಗೆ ಬಂದರೆ ಅಮೆರಿಕ ಸಂಗ್ರಹಿಸುವ ಸುಂಕ $725 ಮಿಲಿಯನ್ ಆಗಬಹುದು ಎಂದು ಭಾರತದ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವುದನ್ನು ರಾಯಿಟರ್ಸ್ ವರದಿ ಮಾಡಿದೆ. ಪ್ರತಿಯಾಗಿ, ಭಾರತ ಈಗ "ಯುನೈಟೆಡ್ ಸ್ಟೇಟ್ಸ್‌ನಲ್ಲಿ ತಯಾರಾಗುವ ಉತ್ಪನ್ನಗಳಿಂದ ಸಮಾನ ಪ್ರಮಾಣದ ಸುಂಕ"ವನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಅಮೆರಿಕ ತೆಗೆದುಕೊಂಡ ಕ್ರಮಗಳು 1994 ರ GATT (ವ್ಯಾಪಾರ ಮತ್ತು ಸುಂಕದ ಸಾಮಾನ್ಯ ಒಪ್ಪಂದ) ಮತ್ತು ಸುರಕ್ಷತಾ ಒಪ್ಪಂದಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಭಾರತ ಸಮರ್ಥಿಸಿದೆ.
ಈ ಸುಂಕಗಳ ಕುರಿತು ಭಾರತ ಕೋರಿದ ಸಮಾಲೋಚನೆಗಳು ನಡೆದಿಲ್ಲವಾದ್ದರಿಂದ, "ರಿಯಾಯತಿಗಳನ್ನು ಅಥವಾ ಇತರ ಬಾಧ್ಯತೆಗಳನ್ನು ಅಮಾನತುಗೊಳಿಸುವ ಹಕ್ಕನ್ನು ಭಾರತ" ಹೊಂದಿದೆ ಎಂದು WTO ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
"ಭಾರತ-ಯುಎಸ್ ನಡುವೆ ಬಹಳ ದೊಡ್ಡ ಒಪ್ಪಂದದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಈ ಬೆಳವಣಿಗೆ ಸಂಭವಿಸಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಎರಡೂ ರಾಷ್ಟ್ರಗಳ ನಡುವೆ ಶೀಘ್ರದಲ್ಲೇ "ಬಹಳ ದೊಡ್ಡ ಒಪ್ಪಂದ" ನಡೆಯಲಿದೆ ಎಂದು ಘೋಷಿಸಿದ್ದರು. ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಅಮೆರಿಕದ ಸುಂಕಗಳ ವಿರುದ್ಧ ಭಾರತ ಕಳೆದ ತಿಂಗಳು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿತ್ತು.