ಟೆಲ್ ಅವೀವ್: ಸಿರಿಯಾ ಮೇಲಿನ ತನ್ನ ವಾಯುದಾಳಿಯನ್ನು ಮತ್ತಷ್ಟು ಹೆಚ್ಚಿಸಿರುವ ಇಸ್ರೇಲ್ ವಾಯುಸೇನೆ ಇದೀಗ ಸಿರಿಯಾ ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ್ದು, ಇದೇ ಸಂದರ್ಭದಲ್ಲಿ ಸುದ್ದಿ ಓದುತ್ತಿದ್ದ ಟಿವಿ ನಿರೂಪಕಿ ಜೀವ ಉಳಿಸಿಕೊಳ್ಳಲು ಲೈವ್ ಕಾರ್ಯಕ್ರಮ ಬಿಟ್ಟು ಓಡಿದ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಸಿರಿಯಾ ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು ಈ ವೇಳೆ ಸಂಭವಿಸಿದ ಭೀಕರ ಸ್ಫೋಟದಿಂದಾಗಿ ಇಡೀ ಕಟ್ಟಡ ಧರೆಗುರುಳಿದೆ. ದಕ್ಷಿಣ ನಗರವಾದ ಸ್ವೀಡಾದಲ್ಲಿ ಸರ್ಕಾರಿ ಭದ್ರತಾ ಪಡೆಗಳು ಮತ್ತು ಸ್ಥಳೀಯ ಹೋರಾಟಗಾರರ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಾಗ ಇಸ್ರೇಲ್ ಸಿರಿಯಾವನ್ನು ಗುರಿಯಾಗಿಸಿಕೊಂಡು ಸತತ ಮೂರನೇ ದಿನ ದಾಳಿ ನಡೆಸಿದೆ.
ರಾಜಧಾನಿ ಡಮಾಸ್ಕಸ್‌ನ ಮಧ್ಯಭಾಗದಲ್ಲಿರುವ ರಕ್ಷಣಾ ಸಚಿವಾಲಯದ ಕಟ್ಟಡದ ಮೇಲೆ ಇಸ್ರೇಲ್ ಆಕ್ರಮಣ ವೈಮಾನಿಕ ದಾಳಿ ನಡೆದಿದೆ.
ಲೈವ್ ಕಾರ್ಯಕ್ರಮ ಬಿಟ್ಟು ಓಡಿದ ನಿರೂಪಕಿ
ಇಸ್ರೇಲ್ ದಾಳಿ ಸುದ್ದಿ ಪ್ರಸ್ತುತ ಪಡಿಸುತ್ತಿರುವಾಗಲೇ ಸ್ಫೋಟ ಸಂಭವಿಸಿದ ಘಟನೆ ಕೂಡ ನಡೆದಿದೆ. ಸಿರಿಯಾ ಮಿಲಿಟರಿ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ ನಾಟಕೀಯ ಕ್ಷಣವನ್ನು ವರದಿ ಮಾಡುವಾಗ ಬಾಂಬ್ ಸ್ಫೋಟಿಸಿದ್ದು ಪತ್ರಕರ್ತ ಭಯಭೀತರಾಗಿ ಸ್ಥಳದಿಂದ ಓಡಿಹೋಗಿದ್ದಾರೆ.
ಇತ್ತ ಈ ಸುದ್ದಿಯನ್ನು ಸುದ್ದಿ ನಿರೂಪಕಿ ಪ್ರಸ್ತುತ ಪಡಿಸುತ್ತಿರುವಂತೆಯೇ ಸುದ್ದಿವಾಹಿನಿ ಕಟ್ಟಡದ ಹೊರಗೆ ದೊಡ್ಡ ಸ್ಫೋಟ ಸಂಭವಿಸಿದೆ. ಈ ವೇಳೆ ನಿರೂಪಕಿ ತನ್ನ ಜೀವ ಉಳಿಸಿಕೊಳ್ಳಲು ಲೈವ್ ಕಾರ್ಯಕ್ರಮ ಬಿಟ್ಟು ಓಡಿದ್ದಾರೆ. ವರದಿಗಾರ್ತಿ ತನ್ನ ಆಸನದಿಂದ ಸುರಕ್ಷಿತವಾಗಿ ಹೊರಬರುವ ಮೊದಲು ಸ್ಫೋಟದ ಪರಿಣಾಮವಾಗಿ ಕ್ಯಾಮೆರಾ ಅಲುಗಾಡುತ್ತದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ದಿಢೀರ್ ಉಲ್ಬಣಗೊಂಡ ಇಸ್ರೇಲ್-ಸಿರಿಯಾ ಸಂಘರ್ಷ
ಕೆಲವು ದಿನಗಳ ಹಿಂದೆ ಇಸ್ರೇಲ್ ಮತ್ತು ಸಿರಿಯಾ ನಡುವೆ ಸಂಘರ್ಷ ದಿಢೀರ್ ಉಲ್ಬಣಗೊಂಡಿತು. ಉಭಯ ದೇಶಗಳ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಇಸ್ರೇಲ್ ದಕ್ಷಿಣ ಸಿರಿಯಾದಲ್ಲಿ ಸರ್ಕಾರಿ ಪಡೆಗಳ ಬೆಂಗಾವಲುಗಳ ಮೇಲೆ ಸರಣಿ ವಾಯುದಾಳಿಗಳನ್ನು ಪ್ರಾರಂಭಿಸಿದೆ. ಮಂಗಳವಾರ ನಡೆದ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಸಿರಿಯನ್ ರಕ್ಷಣಾ ಸಚಿವಾಲಯವು ಸ್ವೀಡಾದ ಡ್ರೂಜ್ ಬಹುಸಂಖ್ಯಾತ ಪ್ರದೇಶದಲ್ಲಿನ ಇಸ್ರೇಲ್ ಸೇನೆಯನ್ನು ದೂಷಿಸಿತ್ತು. ಅಂತೆಯೇ ಇದು ಸಿರಿಯನ್ ಸೈನ್ಯವನ್ನು ಪ್ರತಿದಾಳಿ ಮಾಡಲು ಪ್ರೇರೇಪಿಸಿತು.
ಸ್ವೀಡಾದಲ್ಲಿನ ಪರಿಸ್ಥಿತಿ ಗಂಭೀರವಾಗಿದೆ: ನೆತನ್ಯಾಹು
ಇನ್ನು ಇದೇ ವಿಚಾರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು X ನಲ್ಲಿ ಮಾತನಾಡಿದ್ದು, "ನನ್ನ ಸಹೋದರರೇ, ಇಸ್ರೇಲ್‌ನ ಡ್ರೂಜ್ ನಾಗರಿಕರು: ಸ್ವೀಡಾದಲ್ಲಿನ ಪರಿಸ್ಥಿತಿ, ನೈಋತ್ಯ ಸಿರಿಯಾದಲ್ಲಿನ ಪರಿಸ್ಥಿತಿ, ತುಂಬಾ ಗಂಭೀರವಾಗಿದೆ. IDF ಕಾರ್ಯನಿರ್ವಹಿಸುತ್ತಿದೆ, ವಾಯುಪಡೆ ಕಾರ್ಯನಿರ್ವಹಿಸುತ್ತಿದೆ. ಇತರ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ಡ್ರೂಜ್ ಸಹೋದರರನ್ನು ಉಳಿಸಲು ಮತ್ತು ಆಡಳಿತದ ಗ್ಯಾಂಗ್‌ಗಳನ್ನು ನಿರ್ಮೂಲನೆ ಮಾಡಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ.
ನನಗೆ ನಿಮ್ಮಲ್ಲಿ ಒಂದೇ ಒಂದು ವಿನಂತಿ ಇದೆ: ನೀವು ಇಸ್ರೇಲಿ ನಾಗರಿಕರು. ಗಡಿ ದಾಟಬೇಡಿ. ಒಂದು ವೇಳೆ ನೀವು ಹಾಗೆ ಮಾಡಿದರೆ ನಿಮ್ಮ ಜೀವಗಳನ್ನು ಪಣಕ್ಕಿಡುತ್ತಿದ್ದೀರಿ ಎಂದು.. ಅವರು ನಿಮ್ಮನ್ನು ಕೊಲ್ಲಬಹುದು, ನಿಮ್ಮನ್ನು ಒತ್ತೆಯಾಳಾಗಿ ತೆಗೆದುಕೊಳ್ಳಬಹುದು. ನೀವು IDF ನ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ: ನಿಮ್ಮ ಮನೆಗಳಿಗೆ ಹಿಂತಿರುಗಿ ಮತ್ತು IDF ಕ್ರಮ ಕೈಗೊಳ್ಳಲಿದೆ' ಎಂದು ಟ್ವೀಟ್ ಮಾಡಿದ್ದರು.
ಸ್ವೀಡಾದಲ್ಲಿ ಪರಿಸ್ಥಿತಿ ಗಂಭೀರ
ಇನ್ನು ಸಿರಿಯನ್ ರಾಜಧಾನಿ ಡಮಾಸ್ಕಸ್ ಮತ್ತು ಡ್ರೂಜ್ ಬಹುಸಂಖ್ಯಾತ ನಗರವಾದ ಸ್ವೀಡಾದ ಮೇಲೆ ಇಸ್ರೇಲಿ ವಾಯುಸೇನೆ ಬಾಂಬ್‌ಗಳ ಮಳೆ ಸುರಿಯುತ್ತಿದೆ. ಇಸ್ರೇಲಿ ಎಚ್ಚರಿಕೆಗಳ ಹೊರತಾಗಿಯೂ ಸಿರಿಯನ್ ಸರ್ಕಾರಿ ಪಡೆಗಳು ಅಲ್ಲಿ ನೆಲೆಗೊಂಡಿವೆ ಎಂದು ಎಎಫ್‌ಪಿ ವರದಿ ಮಾಡಿದೆ.