ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸೋಮವಾರ ಸಂಭವಿಸಿದ ಸರಣಿ ಭೂಕಂಪ ಬೆನ್ನಲ್ಲೇ ಕರಾಚಿಯ ಜಿಲ್ಲಾ ಕಾರಾಗೃಹದಲ್ಲಿದ್ದ 200ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿರುವುದಾಗಿ ವರದಿಗಳು ತಿಳಿಸಿವೆ.
ರಿಕ್ಟರ್ ಮಾಪಕದಲ್ಲಿ 3.2 ಮತ್ತು 3.6ರ ಕಡಿಮೆ ತೀವ್ರತೆಯ ಮೂರು ಸರಣಿ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರ ಬಿಂದು ಲಂಧಿ ಫಾಲ್ಟ್ ಪ್ರದೇಶ ಎಂದು ಗುರುತಿಸಲಾಗಿದೆ.
ಭೂಕಂಪದಿಂದಾಗಿ ಜೈಲಿನ ಗೋಡೆಗಳು ಭಾಗಶಃ ಕುಸಿದು ಬಿದ್ದಿದ್ದು, ಈ ಪರಿಸ್ಥಿತಿಯನ್ನೇ ಲಾಭವಾಗಿ ಉಪಯೋಗಿಸಿಕೊಂಡ ಕೈದಿಗಳು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಕಾನೂನು ಸಚಿವರು, ಸರಣಿ ಭೂಕಂಪದಿಂದಾಗಿ ಕೈದಿಗಳು ಭೀತಿಗೊಳಗಾಗಿದ್ದರು. ಹೀಗಾಗಿ ಸ್ಥಳದಲ್ಲಿ ತಳ್ಳಾಟ, ನೂಕಾಟ ಶುರುವಾಗಿ, ತಪ್ಪಿಸಿಕೊಂಡಿದ್ದಾರೆಂದು ಹೇಳಿದ್ದಾರೆ.
ಭೂಕಂಪದಿಂದ ಗೋಡೆಗಳು ಭಾಗಶಃ ಕುಸಿದು ಬಿದ್ದ ಪರಿಣಾಮ ಕೈದಿಗಳು ಪರಾರಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಇದಲ್ಲದೆ, ಪರಾರಿ ವೇಳೆ ಕೈದಿಗಳು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಪರಾರಿಯಾಗಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಕೈದಿ ಸಾವನ್ನಪ್ಪಿ, ಮೂವರು ಪೊಲೀಸರೂ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.