ಟೆಹ್ರಾನ್ : ಈ ವಾರದ ಆರಂಭದಲ್ಲಿ ಇರಾನ್ ದೇಶದ ಪರಮಾಣು ಘಟಕಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಶನಿವಾರ ರಾತ್ರಿ ಭಾರತೀಯ ಉದ್ಯಮಿ ಗೌತಮ್ ಅದಾನಿ ಗ್ರೂಪ್ ನ ಇಸ್ರೇಲಿನ ಹೈಫಾ ಬಂದರು ಮತ್ತು ಅದರ ಸಮೀಪದ ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿ ಇರಾನ್ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ ಎನ್ನಲಾಗಿದೆ.
ಆದರೆ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಅಡೆತಡೆಯಿಲ್ಲದೆ ಸರಕು ಕಾರ್ಯಾಚರಣೆಗಳು ಮುಂದುವರೆದಿವೆ ಎಂದು ಮೂಲಗಳು ತಿಳಿಸಿವೆ.
ಬಂದರಿನಲ್ಲಿರುವ ರಾಸಾಯನಿಕ ಟರ್ಮಿನಲ್‌ನಲ್ಲಿ ಶಾರ್ಪ್‌ನೆಲ್ ಶೆಲ್ ಗಳು (shrapnel) ಬಿದಿದ್ದರೆ, ತೈಲ ಸಂಸ್ಕರಣಾಗಾರದಲ್ಲಿ ಇತರ ಕೆಲವು ಸ್ಪೋಟಕಗಳು ಬಿದ್ದಿರುವುದಾಗಿ ಎರಡು ಮೂಲಗಳು ತಿಳಿಸಿವೆ. ಆದರೆ ಯಾವುದೇ ಗಾಯಗಳಾಗಿಲ್ಲ, ಅದಾನಿ ಬಂದರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅವುಗಳು ತಿಳಿಸಿವೆ.
ಕಿಶನ್ ವೆಸ್ಟ್ (ಹೈಫಾ ಬಂದರು) ನಲ್ಲಿ ಶಾರ್ಪ್ ನೆಲ್ (shrapnel)ಚೂರುಗಳು ಕಂಡುಬಂದಿವೆ. ಆದರೆ ಯಾವುದೇ ಗಾಯದ ಕುರಿತು ವರದಿಯಾಗಿಲ್ಲ. ಅದಾನಿ-ಚಾಲಿತ ಬಂದರಿನಲ್ಲಿ ಸರಕು ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗಿಲ್ಲ. ಬಂದರಿನಲ್ಲಿ ಈಗ ಎಂಟು ಹಡಗುಗಳಿವೆ, ಸರಕು ಸಾಗಣೆ ಕಾರ್ಯಾಚರಣೆ ಎಂದಿನಂತೆ ನಡೆದಿದೆ. ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯು ಅದಾನಿ ಬಂದರು ಅಥವಾ ಅದರ ಕಾರ್ಯಾಚರಣೆಗಳಿಗೆ ಯಾವುದೇ ಹಾನಿ ಉಂಟು ಮಾಡಿಲ್ಲ ಎಂದು ಮೂಲಗಳು ಹೇಳಿವೆ.
ಅದಾನಿ ಗುಂಪು ಈ ಕುರಿತು ತತ್ ಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಇಸ್ರೇಲ್ ಸರ್ಕಾರದ ಅಧಿಕಾರಿಗಳಿಂದಲೂ ಯಾವುದೇ ಹೇಳಿಕೆ ಬಂದಿಲ್ಲ. ಹೈಫಾ ಬಂದರು ನಿರ್ಣಾಯಕ ಕಡಲ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.ಇಸ್ರೇಲ್ ಆಮದುಗಳಲ್ಲಿ ಶೇ. 30 ರಷ್ಟನ್ನು ನಿರ್ವಹಿಸುತ್ತದೆ. ಇದು ಅದಾನಿ ಪೋರ್ಟ್ಸ್ ಒಡೆತನದಲ್ಲಿದ್ದು, ಶೇ. 70 ರಷ್ಟು ಪಾಲನ್ನು ಹೊಂದಿದೆ. ಕ್ಷಿಪಣಿಗಳು ಬಂದರಿನ ಸಮೀಪವಿರುವ ಪ್ರಮುಖ ತೈಲ ಸಂಸ್ಕರಣಾಗಾರಕ್ಕೆ ಹಾನಿಯನ್ನುಂಟುಮಾಡಿರಬಹುದು ಆದರೆ ಬಂದರಿನ ಮೇಲಿನ ಹಾನಿ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆಗಳು ಬಂದಿಲ್ಲ.