ತೆಹ್ರಾನ್: ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ರಾತ್ರಿಯಿಡೀ ಅಮೆರಿಕದ ವಾಯುದಾಳಿಗಳ ಬೆನ್ನಲ್ಲೇ ಇರಾನ್ ನ ವಿದೇಶಾಂಗ ಸಚಿವರು ರಷ್ಯಾಗೆ ಭೇಟಿ ನೀಡುವುದನ್ನು ದೃಢಪಡಿಸಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆಗಾಗಿ ಮಾಸ್ಕೋಗೆ ಪ್ರಯಾಣಿಸುವುದಾಗಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಭಾನುವಾರ ಘೋಷಿಸಿದ್ದಾರೆ.
ಇಸ್ತಾನ್‌ಬುಲ್‌ನಲ್ಲಿ ನಡೆದ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಶೃಂಗಸಭೆಯ ಹೊರತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರಗ್ಚಿ, ಅಧ್ಯಕ್ಷ ಪುಟಿನ್ ಅವರೊಂದಿಗೆ ಸಮಾಲೋಚನೆಗಳು ಸೋಮವಾರ ಬೆಳಿಗ್ಗೆ ನಡೆಯಲಿವೆ ಎಂದು ತಿಳಿಸಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯಲು ಅಮೆರಿಕ ಮೂರು ಪ್ರಮುಖ ಇರಾನಿನ ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕ ಇರಾನ್ ಮೇಲಿನ ತನ್ನ ದಾಳಿಯನ್ನು "ಅಗತ್ಯ ಹೆಜ್ಜೆ" ಎಂದು ಸಮರ್ಥಿಸಿಕೊಂಡಿದೆ.
"ರಷ್ಯಾ ಇರಾನ್‌ನ ಸ್ನೇಹಿತ, ನಾವು ಯಾವಾಗಲೂ ಪರಸ್ಪರ ಸಮಾಲೋಚಿಸುತ್ತೇವೆ" ಎಂದು ಅರಗ್ಚಿ ವರದಿಗಾರರಿಗೆ ತಿಳಿಸಿದ್ದಾರೆ. "ನಾಳೆ ಬೆಳಿಗ್ಗೆ ರಷ್ಯಾದ ಅಧ್ಯಕ್ಷರೊಂದಿಗೆ ಗಂಭೀರ ಸಮಾಲೋಚನೆಗಾಗಿ ನಾನು ಇಂದು ಮಧ್ಯಾಹ್ನ ರಷ್ಯಾ ರಾಜಧಾನಿ ಮಾಸ್ಕೋಗೆ ತೆರಳುತ್ತಿದ್ದೇನೆ." ಎಂದು ಅರಗ್ಚಿ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಪ್ರಕಾರ ಇರಾನ್ ಮೇಲೆ ಅಮೆರಿಕ ದಾಳಿ ಶನಿವಾರ ತಡರಾತ್ರಿ ನಡೆದಿದೆ. ಇರಾನ್ ಪರಮಾಣು ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನೇತೃತ್ವದ ವೈಮಾನಿಕ ಕಾರ್ಯಾಚರಣೆಯ ಒಂಬತ್ತು ದಿನಗಳ ನಂತರ ನಡೆದಿವೆ.
ಇರಾನ್‌ನ ಸಂಭಾವ್ಯ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ತಟಸ್ಥಗೊಳಿಸುವತ್ತ ದಾಳಿಗಳು ಕೇಂದ್ರೀಕೃತವಾಗಿವೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿಗಳನ್ನು ಅಂತರರಾಷ್ಟ್ರೀಯ ಕಾನೂನಿನ ಸಂಪೂರ್ಣ ಉಲ್ಲಂಘನೆ ಎಂದು ಇರಾನ್ ವಿದೇಶಾಂಗ ಸಚಿವರು ಖಂಡಿಸಿದ್ದಾರೆ.
ಇದೇ ವೇಳೆ ಮಾಸ್ಕೋದಲ್ಲಿ, ರಷ್ಯಾದ ಮಾಜಿ ಅಧ್ಯಕ್ಷ ಮತ್ತು ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ಮಧ್ಯಪ್ರಾಚ್ಯವನ್ನು ಹೊಸ ಯುದ್ಧಕ್ಕೆ ದೂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೆಡ್ವೆಡೆವ್ ತಮ್ಮ ಪ್ರತಿಕ್ರಿಯೆಯನ್ನು ಟೆಲಿಗ್ರಾಮ್‌ನಲ್ಲಿ ಪ್ರಕಟಿಸಿದ್ದು, "ಶಾಂತಿಪ್ರಿಯ ಅಧ್ಯಕ್ಷರಾಗಿ ಬಂದ ಟ್ರಂಪ್, ಅಮೆರಿಕಕ್ಕಾಗಿ ಹೊಸ ಯುದ್ಧವನ್ನು ಪ್ರಾರಂಭಿಸಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಹಲವಾರು ದೇಶಗಳು ಇರಾನ್‌ಗೆ ತಮ್ಮದೇ ಆದ ಪರಮಾಣು ಸಿಡಿತಲೆಗಳನ್ನು ನೇರವಾಗಿ ಪೂರೈಸಲು ಸಿದ್ಧವಾಗಿವೆ" ಎಂದು ಮೆಡ್ವೆಡೆವ್ ಹೇಳಿದ್ದಾರೆ. ಅವರು ಯಾವ ರಾಷ್ಟ್ರಗಳನ್ನು ಉಲ್ಲೇಖಿಸುತ್ತಿದ್ದಾರೆಂದು ಅವರು ಸ್ಪಷ್ಟವಾಗಿ ತಿಳಿಸಿಲ್ಲ.