ಪೋರ್ಟ್ ಲೂಯಿಸ್: ಎರಡು ದಿನಗಳ ಭೇಟಿಗಾಗಿ ಮಾರಿಷಸ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಮಾರಿಷಸ್‌ನಲ್ಲಿರುವ ಭಾರತೀಯ ವಲಸಿಗರು ಆತ್ಮೀಯ ಸ್ವಾಗತ ನೀಡಿದರು.
ಇಂದು ಮಾರಿಷಸ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಭಾರತೀಯ ಸಮುದಾಯದ ಮಹಿಳೆಯರು ಬಿಹಾರಿ ಸಾಂಪ್ರದಾಯಿಕ ಗೀತ್ ಗವಾಯಿಯೊಂದಿಗೆ ಸ್ವಾಗತಿಸಲಾಯಿತು. ಈ ವೇಳೆ ಹಾಡುಗಳನ್ನು ಹಾಡುತ್ತಿರುವವರೊಂದಿಗೆ ಪ್ರಧಾನಿ ಮೋದಿ ಚಪ್ಪಾಳೆ ತಟ್ಟುತ್ತಾ ಆನಂದಿಸಿದರು.
ಗೀತ್ ಗವಾಯಿ ಎಂಬುದು ಭಾರತದ ಭೋಜ್‌ಪುರಿ ಪಟ್ಟಿಯ ಮಹಿಳೆಯರು ಮಾರಿಷಸ್‌ಗೆ ತಂದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾಕಾರಗೊಳಿಸುವ ಸಾಂಪ್ರದಾಯಿಕ ಭೋಜ್‌ಪುರಿ ಸಂಗೀತ ಮೇಳವಾಗಿದೆ.
"ಮಾರಿಷಸ್‌ನಲ್ಲಿರುವ ಭಾರತೀಯ ಸಮುದಾಯದಿಂದ ಬಂದ ಆತ್ಮೀಯ ಸ್ವಾಗತದಿಂದ ನಾನು ತುಂಬಾ ಭಾವುಕನಾಗಿದ್ದೇನೆ. ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳಿಗೆ ಅವರ ಬಲವಾದ ನಂಟು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ" ಎಂದು ಪ್ರಧಾನಿ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾರಿಷಸ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಸರ್ ಸೀವೂಸಾಗುರ್ ರಾಮ್‌ಗೂಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮ್‌ಗೂಲಂ ಅವರು ಹಾರ ಹಾಕಿ ಸ್ವಾಗತಿಸಿದರು.
ಇದಕ್ಕು ಮುನ್ನ "ಹಿಂದೂ ಮಹಾಸಾಗರದ ಪ್ರಮುಖ ಪಾಲುದಾರ ಮತ್ತು ಆಫ್ರಿಕನ್ ಖಂಡದ ಹೆಬ್ಬಾಗಿಲು ಮಾರಿಷಸ್‌ನ ತಮ್ಮ ಭೇಟಿಯ ಸಮಯದಲ್ಲಿ ಅಲ್ಲಿನ ಪ್ರಧಾನಿ ಜೊತೆ ಮಾತುಕತೆಗೆ ಎದುರು ನೋಡುತ್ತಿರುವುದಾಗಿ" ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.
ಮಾರ್ಚ್ 12ರಂದು ನಡೆಯುವ ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತೀಯ ರಕ್ಷಣಾ ಪಡೆಗಳ ತುಕಡಿ ಮತ್ತು ಭಾರತೀಯ ನೌಕಾಪಡೆಯ ಒಂದು ಹಡಗು ಭಾಗವಹಿಸಲಿದೆ. ಪ್ರಧಾನಿ ಮೋದಿ ಅವರು ಕೊನೆಯದಾಗಿ 2015ರಲ್ಲಿ ಮಾರಿಷಸ್‌ಗೆ ಭೇಟಿ ನೀಡಿದ್ದರು.