ಇಸ್ಲಾಮಾಬಾದ್: 40 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ 2019 ರ ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು 6 ವರ್ಷಗಳ ಬಳಿಕ ಪಾಕಿಸ್ತಾನ ಸೇನೆ ಸತ್ಯಾಂಶ ಒಪ್ಪಿಕೊಂಡಿದ್ದು, ಅಂದಿನ ದಾಳಿಯಲ್ಲಿ ತನ್ನ ಕೈವಾಡವಿತ್ತು ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದೆ.
ಪಹಲ್ಗಾಮ್ ಉಗ್ರದಾಳಿ ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿದ್ದ ಸೇನಾ ಸಂಘರ್ಷ ಕದನ ವಿರಾಮ ಘೋಷಣೆಯೊಂದಿಗೆ ಮೆತ್ತಗಾಗಿದೆ. ಈ ನಡುವೆ ಪಾಕಿಸ್ತಾನ ಸೇನೆ ಹಾಲಿ ಸಂಘರ್ಷದಲ್ಲಿ ತಾನು ಮಾಡಿದ ಸುಳ್ಳು ಸಾಧನೆಗಳ ಕುರಿತು ಬೆನ್ನು ತಟ್ಟಿಕೊಳ್ಳುವ ಭರದಲ್ಲಿ ಪುಲ್ವಾಮಾ ಉಗ್ರದಾಳಿಯ ಸತ್ಯಾಂಶ ಬಾಯಿ ಬಿಟ್ಟಿದೆ.
40 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ 2019 ರ ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಭಾರತ ಎಷ್ಟೇ ಆರೋಪ ಮಾಡಿದರೂ ತನ್ನದೇನೂ ಪಾತ್ರವಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ಪಾಕಿಸ್ತಾನ ಇದೀಗ ಸುದ್ದಿಗೋಷ್ಛಿಯಲ್ಲಿ ಬಹಿರಂಗವಾಗಿಯೇ ಉಗ್ರ ದಾಳಿಯಲ್ಲಿ ತನ್ನ ಕೈವಾಡದ ಕುರಿತು ಮಾತನಾಡಿದೆ. ಪಾಕಿಸ್ತಾನದ ಸೇನಾಧಿಕಾರಿಯೊಬ್ಬರು ನೀಡಿದ ಹೇಳಿಕೆ ಇದಕ್ಕೆ ಪುಷ್ಠಿ ನೀಡಿದ್ದು, 'ಅದು ನಮ್ಮ ಯುದ್ಧತಂತ್ರದ ಪ್ರತಿಭೆಯಾಗಿತ್ತು' ಎಂದು ಹೇಳಿಕೊಂಡಿದ್ದಾರೆ.
ಯುದ್ಧತಂತ್ರದ ಪ್ರತಿಭೆ
ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು (Pakistan Army Official) ನಡೆಸಿದ ಸುದ್ದಿಗೋಷ್ಠಿಯಲ್ಲಿ ಏರ್ ಮಾರ್ಷಲ್ ಔರಂಗಜೇಬ್ ಅಹ್ಮದ್ ಮಾತನಾಡಿ, ಪುಲ್ವಾಮಾ ಭಯೋತ್ಪಾದಕ ದಾಳಿಯು ಪಾಕಿಸ್ತಾನಿ ಮಿಲಿಟರಿಯ ʻಯುದ್ಧತಂತ್ರದ ಭಾಗʼ ಎಂದು ಹೇಳಿದ್ದಾರೆ.
ಅವರು ಡೈರೆಕ್ಟರ್ ಜನರಲ್ ಐಎಸ್‌ಪಿಆರ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಮತ್ತು ನೌಕಾಪಡೆಯ ವಕ್ತಾರರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಮೂಲಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರವನ್ನು ಬಹಿರಂಗವಾಗಿ ಪಾಕ್ ಒಪ್ಪಿಕೊಂಡಿದ್ದಾರೆ. ಈ ಸುದ್ದಿಗೋಷ್ಟಿಯ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ಈ ವಿಡಿಯೋ ಆಧಾರವಾಗಿಟ್ಟುಕೊಂಡು ಪಾಕ್ ಸೇನೆ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ಔರಂಗಜೇಬ್ ಅಹ್ಮದ್ ಹೇಳಿದ್ದೇನು?
ಪಾಕಿಸ್ತಾನದ ವಾಯುಪ್ರದೇಶ, ಭೂಮಿ, ಜಲಪ್ರದೇಶಗಳು ಅಥವಾ ಇಲ್ಲಿನ ಜನರಿಗೆ ಬೆದರಿಕೆಯೊಡ್ಡಿದರೆ, ಯಾವುದೇ ರಾಜಿ ಸಾಧ್ಯವಿಲ್ಲ. ಅದನ್ನು ಗಮನಿಸದೆ ಬಿಡಲೂ ಸಾಧ್ಯವಿಲ್ಲ. ನಾವು ನಮ್ಮ ರಾಷ್ಟ್ರಕ್ಕೆ ಋಣಿಯಾಗಿದ್ದೇವೆ. ಪಾಕಿಸ್ತಾನಿ ಜನರು ತಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೊಂದಿರುವ ಹೆಮ್ಮೆ ಮತ್ತು ನಂಬಿಕೆಯನ್ನ ನಾವು ಯಾವಾಗಲೂ ಎತ್ತಿಹಿಡಿಯುತ್ತೇವೆ. ಪುಲ್ವಾಮಾದಲ್ಲಿ ನಮ್ಮ ಯುದ್ಧತಂತ್ರದ ಪ್ರತಿಭೆಯ ಮೂಲಕ ನಾವು ಅದನ್ನು ತಿಳಿಸಲು ಪ್ರಯತ್ನಿಸಿದ್ದೇವೆ. ಈಗಲೂ ನಮ್ಮ ಕಾರ್ಯಾಚರಣೆ ಮತ್ತು ಕಾರ್ಯತಂತ್ರವನ್ನು ಪ್ರದರ್ಶಿಸಿದ್ದೇವೆ. ಇದನ್ನ ಅವರು ಕೂಡ ಗಮನಿಸಿರುತ್ತಾರೆ ಅಂತ ಭಾವಿಸುತ್ತೇನೆ ಎಂದು ಪಾಕಿಸ್ತಾನ ಏರ್ ಮಾರ್ಷಲ್ ಔರಂಗಜೇಬ್ ಅಹ್ಮದ್ ಹೇಳಿದ್ದಾರೆ.
ಸೈನಿಕರ ಮೇಲಿನ ಹೀನ ದಾಳಿ
2019ರ ಫೆ. 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಉಗ್ರ ಅದಿಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ್ದ ಕಾರನ್ನು ಗುದ್ದಿಸಿದ್ದ. ಈ ವೇಳೆ ಭಾರಿ ಸ್ಫೋಟ ಸಂಭವಿಸಿತ್ತು. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಸ್ಫೋಟದ ತೀವ್ರತೆಗೆ ಯೋಧರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ದೂರದವರೆಗೆ ಚಿಮ್ಮಿತ್ತು.
ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದೇ ವಾಯುದಾಳಿಯಲ್ಲಿ ಭಾರತದ ಪರ ದಾಳಿಗೆ ಇಳಿದಿದ್ದ ವಾಯುಸೇನೆ ಪೈಲಟ್ ಅಭಿನಂದನ್ ವರ್ಧಮಾನ್ ರ ವಿಮಾನವನ್ನು ಪಾಕ್ ಸೇನೆ ಹೊಡೆದುರುಳಿಸಿತ್ತು. ಬಳಿಕ ಅಭಿನಂದನ್ ರನ್ನು ಬಂಧಿಸಿತ್ತು. ಬಳಿಕ ಭಾರತ ರಾಜತಾಂತ್ರಿಕತೆಯ ಮೂಲಕ ಅಭಿನಂದನ್ ರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಂಡಿತ್ತು.