ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸೇನಾ ಸಂಘರ್ಷದಿಂದಾಗಿ ಪಾಕಿಸ್ತಾನಕ್ಕೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ.
ಆದಾಗ್ಯೂ ತಮಗೇನೂ ಆಗಿಲ್ಲ.. ಭಾರತದ ಜೊತೆಗಿನ ಸಂಘರ್ಷದಲ್ಲಿ ಪಾಕಿಸ್ತಾನವೇ ಗೆದ್ದಿದೆ ಎಂದು ಬೀಗುತ್ತಿದ್ದ ಪಾಕಿಸ್ತಾನಕ್ಕೆ ಮುಜುಗರ ಏರ್ಪಟ್ಟಿದೆ. ಈ ಹಿಂದೆ ಭಾರತದ ವಾಯುನೆಲೆ ಹೊಡೆದುರುಳಿಸಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ಸೇನಾ ವಕ್ತಾರ ಅಹ್ಮದ್ ಷರೀಫ್ ಹೇಳಿದ್ದರು.
ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ತೋರಿಸಿದ್ದರು. ಆ ವಿಡಿಯೋದಲ್ಲಿ ನಿರೂಪಕಿಯೊಬ್ಬರು ವಾಯುನೆಲೆ ಧ್ವಂಸವಾದ ಕುರಿತು ಮಾಹಿತಿ ನೀಡುತ್ತಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಪಾಕಿಸ್ತಾನ ವಾಯುಸೇನೆ ಭಾರತದ ವಾಯುನೆಲೆ ಧ್ವಂಸ ಮಾಡಿದೆ ಎಂದು ಷರೀಫ್ ಹೇಳಿದ್ದರು.
ಅಸಲೀಯತ್ತೇ ಬೇರೆ
ಆದರೆ ಅಚ್ಚರಿ ಎಂದರೆ ಪಾಕ್ ಸೇನಾ ವಕ್ತಾರ ತೋರಿಸಿದ್ದ ವಿಡಿಯೋ ಭಾರತದ್ದು ಅಲ್ಲವೇ ಅಲ್ಲ.. ಬದಲಿಗೆ ಅದು ಪಾಕಿಸ್ತಾನದ್ದು. ಅದೂ ಅಲ್ಲದೆ ಅಂದು ನಿರೂಪಣೆ ಮಾಡುತ್ತಿದ್ದದ್ದು ಭಾರತದ ಆಜ್ ತಕ್ ಸುದ್ದಿ ವಾಹಿನಿಯ ನಿರೂಪಕಿ.
ಭಾರತೀಯ ವಾಯುಸೇನೆ ಪಾಕಿಸ್ತಾನದ ವಾಯುನೆಲೆ ಧ್ವಂಸ ಮಾಡಿದ್ದ ವಿಡಿಯೋವನ್ನೇ ಪಾಕಿಸ್ತಾನ ವಕ್ತಾರು ಪಾಕ್ ಮಾಧ್ಯಮಗಳಿಗೆ ತೋರಿಸಿದ್ದಾರೆ. ಆದರೆ ಈ ವಿಡಿಯೋ ಭಾರತದಲ್ಲ.. ಬದಲಿಗೆ ಪಾಕಿಸ್ತಾನದ್ದು ಎಂದು ಗೊತ್ತಾಗಿದೆ. ಆ ಮೂಲಕ ಪಾಕಿಸ್ತಾನ ಸೇನಾಧಿಕಾರಿಗಳ ಸುಳ್ಳಿನ ಸರಣಿಗೆ ಇದೂ ಒಂದು ಸೇರಿದೆ.