ಇಸ್ಲಾಮಾಬಾದ್: ದುಬೈ ಏರ್ ಶೋ ವೇಳೆ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ ಮೃತಪಟ್ಟ ಭಾರತೀಯ ಪೈಲಟ್‌ಗೆ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಸಂತಾಪ ಸೂಚಿಸಿದ್ದಾರೆ. ನೆರೆಯ ರಾಷ್ಟ್ರದೊಂದಿಗಿನ ವೈರತ್ವವು 'ಆಕಾಶಕ್ಕೆ ಮಾತ್ರ' ಎಂದು ಹೇಳಿದ್ದಾರೆ.
ದುಬೈನಲ್ಲಿ ನಡೆಯುತ್ತಿದ್ದ ಏರ್‌ಶೋ ವೇಳೆ ಶುಕ್ರವಾರ ಎಚ್‌ಎಎಲ್ ನಿರ್ಮಿತ, ಏಕ ಆಸನವುಳ್ಳ ಯುದ್ಧ ವಿಮಾನ ನೋಡು ನೋಡುತ್ತಿದ್ದಂತೆಯೇ ಆಗಸದಿಂದ ನೆಲಕ್ಕೆ ಅಪ್ಪಳಿಸಿ ಬೆಂಕಿಯುಂಡೆಯಾಯಿತು. ಘಟನೆಯಲ್ಲಿ ಪೈಲಟ್ ವಿಂಗ್ ಕಮಾಂಡರ್ ನಮನ್ಶ್ ಸಯಾಲ್ ಮೃತಪಟ್ಟಿದ್ದಾರೆ.
'ದುಬೈ ಏರ್ ಶೋ 2025ರಲ್ಲಿ ಪತನಗೊಂಡ ಭಾರತೀಯ ವಾಯುಪಡೆಗೆ ಸೇರಿದ HAL ನಿರ್ಮಿತ ಲಘು ಯುದ್ಧ ವಿಮಾನ (LCA) ತೇಜಸ್‌ನ ಪೈಲಟ್‌ನ ಕುಟುಂಬಕ್ಕೆ ಪಾಕಿಸ್ತಾನ ಕಾರ್ಯತಂತ್ರದ ವೇದಿಕೆಯು ಇಡೀ ರಾಷ್ಟ್ರದ ಪರವಾಗಿ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸುತ್ತದೆ' ಎಂದು ಆಸಿಫ್ X ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ದುರದೃಷ್ಟವಶಾತ್ ಐಎಎಫ್ ಪೈಲಟ್ ವಿಮಾನದಿಂದ ಹೊರಕ್ಕೆ ಹಾರಲು ಸಾಧ್ಯವಾಗಿಲ್ಲ ಮತ್ತು ಅಪಘಾತದಿಂದ ಬದುಕುಳಿಯಲಿಲ್ಲ' ಎಂಬ ವೇದಿಕೆಯ ಸಂದೇಶವನ್ನು ಸಚಿವರು ಹಂಚಿಕೊಂಡಿದ್ದಾರೆ.
ಭಾರತದ ವಾಯುಪಡೆಯೊಂದಿಗಿನ ನಮ್ಮ ಪೈಪೋಟಿ ಆಕಾಶಕ್ಕೆ ಮಾತ್ರ ಸೀಮಿತವಾಗಿ. ಕುರಾನ್ ಮತ್ತು ಸುನ್ನತ್‌ನ ಬೋಧನೆಗಳ ಪ್ರಕಾರ, ನಾವು ಯಾವುದೇ ದುರದೃಷ್ಟಕರ ಘಟನೆಯನ್ನು ಆಚರಿಸುವುದಿಲ್ಲ ಮತ್ತು ಆಕಾಶಕ್ಕೆ ಮತ್ತು ಅದರಾಚೆಗೆ, ಧೈರ್ಯಶಾಲಿ ಹೃದಯಕ್ಕೆ ಸಂತಾಪಗಳು' ಎಂದಿದ್ದಾರೆ.
ಪಾಕಿಸ್ತಾನ ಕಾರ್ಯತಂತ್ರದ ವೇದಿಕೆಯು ಪಾಕಿಸ್ತಾನ ಮತ್ತು ಮಿತ್ರ ರಾಷ್ಟ್ರಗಳ ಸಮಿತಿಗಳ ರಕ್ಷಣಾ ವಿಶ್ಲೇಷಕರ ಸಂಸ್ಥೆಯಾಗಿದ್ದು, ವೇದಿಕೆಯು ತನ್ನ X ಖಾತೆಯಲ್ಲಿನ ವಿವರಣೆಯ ಪ್ರಕಾರ, ಯುದ್ಧತಂತ್ರ ಮತ್ತು ಮಿಲಿಟರಿ ಒಳನೋಟಗಳನ್ನು ಒದಗಿಸುತ್ತದೆ.
ಈ ವರ್ಷದ ಮೇ ತಿಂಗಳಲ್ಲಿ ನಡೆದ ಸಂಘರ್ಷದ ನಂತರ ಉಭಯ ದೇಶಗಳ ನಡುವಿನ ಹದಗೆಟ್ಟ ಸಂಬಂಧಗಳ ನಡುವೆ ಆಸಿಫ್ ಅವರ ಸಂದೇಶ ಬಂದಿದೆ.
ಪಾಕಿಸ್ತಾನ ಕಾರ್ಯತಂತ್ರದ ವೇದಿಕೆ ಕೂಡ ತನ್ನ ಎಕ್ಸ್ ಪೋಸ್ಟ್‌ನಲ್ಲಿ, 'ದುಬೈ ಏರ್‌ಶೋನಲ್ಲಿ ತೇಜಸ್ ಯುದ್ಧವಿಮಾನ ಪತನದಲ್ಲಿ ವಿಂಗ್ ಕಮಾಂಡರ್ ನಮನ್ಶ್ ಸಯಾಲ್ ಅವರ ದುರಂತ ನಷ್ಟಕ್ಕೆ ನಾವು ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ' ಎಂದಿದೆ.
'ಒಬ್ಬ ಪೈಲಟ್ ನಿಧನವು ಗಡಿಗಳನ್ನು ಮೀರಿ ಮತ್ತು ಪೈಪೋಟಿಯನ್ನು ಮೀರಿ ಇಡೀ ಏರೋಸ್ಪೇಸ್ ಸಮುದಾಯಕ್ಕೆ ನಷ್ಟವಾಗಿದೆ. ನಮ್ಮ ಪೈಪೋಟಿ ಆಕಾಶಕ್ಕೆ ಮಾತ್ರ ಸೇರಿದ್ದು, ವಾಯು ಪ್ರದರ್ಶನಗಳಲ್ಲಿ ಅಲ್ಲ, ಅಲ್ಲಿ ನಾವು ಸಾಮಾನ್ಯ ನೆಲೆಯಲ್ಲಿ ಒಟ್ಟಿಗೆ ನಿಲ್ಲುತ್ತೇವೆ, ಹಾರಾಟದ ಉತ್ಸಾಹ ಮತ್ತು ಮಿತಿಗಳನ್ನು ಮೀರಲು ಧೈರ್ಯ ಮಾಡುವವರ ಬಗ್ಗೆ ಗೌರವದಿಂದ ಒಂದಾಗುತ್ತೇವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಅವರ ಸ್ಕ್ವಾಡ್ರನ್‌ನೊಂದಿಗೆ ನಮ್ಮ ಪ್ರಾರ್ಥನೆಗಳು' ಎಂದು ಅದು ಸೇರಿಸಿದೆ.