ಪೇಶಾವರ: ಪೇಶಾವರದಲ್ಲಿರುವ ಪಾಕ್ ಅರೆಸೇನಾ ಪಡೆ ಪ್ರಧಾನ ಕಚೇರಿಯ ಮೇಲೆ ಬಂದೂಕುಧಾರಿಗಳು ಸೋಮವಾರ ದಾಳಿ ನಡೆಸಿದ ನಂತರ ಕನಿಷ್ಠ ಮೂವರು ಜನರು ಸಾವನ್ನಪ್ಪಿದ್ದಾರೆ.
ಕಾನ್‌ಸ್ಟಾಬ್ಯುಲರಿ ಪ್ಯಾರಾಮಿಲಿಟರಿ ಪಡೆಯ ಪ್ರಧಾನ ಕಚೇರಿ ಮೇಲೆ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಮೊದಲ ಆತ್ಮಹತ್ಯಾ ಬಾಂಬರ್ ಕಾನ್‌ಸ್ಟಾಬ್ಯುಲರಿಯ ಮುಖ್ಯ ದ್ವಾರದ ಮೇಲೆ ದಾಳಿ ನಡೆಸಿದರೆ, ಇನ್ನೊಬ ಆವರಣವನ್ನು ಪ್ರವೇಶಿಸಿರುವುದಾಗಿ ಮೂಲಗಳು ಹೇಳಿವೆ. ಕೂಡಲೇ ಸೇನೆ ಮತ್ತು ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದು, ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಿಸಿದ್ದಾರೆ.
ಪ್ರಧಾನ ಕಚೇರಿಯೊಳಗೆ ಕೆಲವು ಭಯೋತ್ಪಾದಕರು ಅಡಗಿರುವ ಮಾಹಿತಿ ಸಿಕ್ಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಅರಸೇನಾ ಪಡೆಯ ಪ್ರಧಾನ ಕಚೇರಿಯು ಜನದಟ್ಟಣೆಯ ಪ್ರದೇಶದಲ್ಲಿದ್ದು, ಮಿಲಿಟರಿ ಕಂಟೋನ್ಮೆಂಟ್‌ಗೆ ಹತ್ತಿರದಲ್ಲಿದೆ. ದಾಳಿಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಲಿಟರಿ ಕಟ್ಟಡದ ಬಳಿ ಭದ್ರತಾ ಸಿಬ್ಬಂದಿ, ಉಗ್ರರೊಂದಿಗೆ ಕಾದಾಟದಲ್ಲಿ ತೊಡಗಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.