ಕೈವ್: ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಶಾಂತಿ ಮಾತುಕತೆ ನಡೆಸುತ್ತಿರುವಾಗಲೇ ಉಕ್ರೇನ್‌ನ ರಾಜಧಾನಿ ಕೈವ್ ಮೇಲೆ ರಷ್ಯಾ ರಾತ್ರೋರಾತ್ರಿ ದಾಳಿ ನಡೆಸಿದೆ.
ಕೈವ್ ನಗರದ ಕಟ್ಟಡಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ.
ಇನ್ನು ದಕ್ಷಿಣ ರಷ್ಯಾದ ಮೇಲೆ ಉಕ್ರೇನ್ ನಡೆಸಿದ ಪ್ರತಿ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಮತ್ತು ಅಮೆರಿಕದ ಶಾಂತಿ ಯೋಜನೆಯ ಕುರಿತು ಮಾತುಕತೆ ನಡೆಸಲು ಅಮೆರಿಕದ ನವೀಕೃತ ಪ್ರಯತ್ನದ ಸಮಯದಲ್ಲೇ ಈ ದಾಳಿಗಳು ನಡೆದಿವೆ.
ದಾಳಿಯಿಂದಾಗಿ ಉಕ್ರೇನ್ ರಾಜಧಾನಿ ಕೈವ್‌ನ ಕೆಲವು ಭಾಗಗಳಲ್ಲಿ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಟೆಲಿಗ್ರಾಮ್‌ಗೆ ಪೋಸ್ಟ್ ಮಾಡಲಾದ ವೀಡಿಯೊ ದೃಶ್ಯಾವಳಿಗಳು ಕೈವ್‌ನ ಪೂರ್ವ ಜಿಲ್ಲೆಯ ಡ್ನಿಪ್ರೊವಿನ್ಸ್‌ಕಿಯಲ್ಲಿರುವ ಒಂಬತ್ತು ಅಂತಸ್ತಿನ ವಸತಿ ಕಟ್ಟಡದಲ್ಲಿ ದೊಡ್ಡದಾಗಿ ಬೆಂಕಿ ಹರಡುತ್ತಿರುವುದು ಸೆರೆಯಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಸೇನಾ ಕಾರ್ಯದರ್ಶಿ ಡಾನ್ ಡ್ರಿಸ್ಕಾಲ್ ಅವರು ಮಂಗಳವಾರ ಅಬುಧಾಬಿಯಲ್ಲಿ ರಷ್ಯಾದ ಅಧಿಕಾರಿಗಳನ್ನು ಭೇಟಿಯಾಗಿ ಹಲವು ಗಂಟೆಗಳ ಕಾಲ ಚರ್ಚಿಸಿದರು ಎಂದು ಅಮೆರಿಕದ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.
ಕಳೆದ ಭಾನುವಾರ ಜಿನೀವಾದಲ್ಲಿ ಅಮೆರಿಕ ಮತ್ತು ಉಕ್ರೇನಿಯನ್ ಪ್ರತಿನಿಧಿಗಳ ನಡುವೆ ಯುಎಸ್-ರಷ್ಯಾ ಮಧ್ಯಸ್ಥಿಕೆಯ ಶಾಂತಿ ಯೋಜನೆಯ ಕುರಿತು ನಡೆದ ಮಾತುಕತೆಯಲ್ಲಿ ಪ್ರಗತಿ ಕಂಡುಬಂದ ನಂತರ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ತಡರಾತ್ರಿ "ಯುದ್ಧವನ್ನು ಕೊನೆಗೊಳಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು" ಎಂದು ಹೇಳಿದರು. ಅಲ್ಲದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ "ಸೂಕ್ಷ್ಮ" ಬಾಕಿ ಇರುವ ಸಮಸ್ಯೆಗಳ ಕುರಿತು ಚರ್ಚಿಸಲು ಯೋಜಿಸಿರುವುದಾಗಿ ತಿಳಿಸಿದ್ದರು.
ಝೆಲೆನ್ಸ್ಕಿಯವರ ಹಿರಿಯ ಸಲಹೆಗಾರರಾದ ರುಸ್ಟೆಮ್ ಉಮೆರೊವ್ ಮಂಗಳವಾರ ಸಾಮಾಜಿಕ ಮಾಧ್ಯಮ X ನಲ್ಲಿ, ಉಕ್ರೇನಿಯನ್ ನಾಯಕ, ಟ್ರಂಪ್ ಜೊತೆ "ನವೆಂಬರ್‌ನಲ್ಲಿ ಆದಷ್ಟು ಬೇಗ ಸೂಕ್ತ ದಿನಾಂಕದಂದು" ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಆಶಿಸುತ್ತಿದ್ದಾರೆ ಎಂದು ಬರೆದಿದ್ದರು.