ಇಸ್ಲಾಮಾಬಾದ್: ಭಾರತದ 'ಆಪರೇಷನ್ ಸಿಂಧೂರ' ದಾಳಿಯಿಂದ ಭಾರಿ ನಷ್ಟ ಅನುಭವಿಸಿರುವ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್-ಇ-ಮೊಹಮ್ಮದ್ (JEM) ಭಾರತ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮತ್ತೆ ಪುಟಿದೇಳಲು ಪ್ರಯತ್ನ ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ಜಮತ್-ಉಲ್- ಮಾಮಿನಾತ್ ಎಂಬ ಮಹಿಳಾ ಘಟಕ (ವಿಂಗ್) ರಚನೆಯ ಘೋಷಣೆ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಜೆಇಎಂ ಮುಖ್ಯಸ್ಥ ಮತ್ತು ವಿಶ್ವಸಂಸ್ಥೆ ಘೋಷಿತ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಹೆಸರಿನಲ್ಲಿ ಬರೆಯಲಾದ ಪತ್ರದಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಹೊಸ ವಿಂಗ್ ಗೆ ನೇಮಕಾತಿ ಆರಂಭ:
ಹೊಸ ಮಹಿಳಾ ಘಟಕಕ್ಕೆ ಅಕ್ಟೋಬರ್ 8ರಂದು ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಮರ್ಕಝ್ ಉಸ್ಮಾನ್-ಒ-ಅಲಿಯಲ್ಲಿ ನೇಮಕಾತಿ ಪ್ರಾರಂಭವಾಗಿದೆ. ಮಹಿಳಾ ಬ್ರಿಗೇಡ್ ಅನ್ನು ಮಸೂದ್ ಅಜರ್ ಅವರ ಸಹೋದರಿ ಸಾದಿಯಾ ಅಜರ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಮಹಿಳಾ ವಿಂಗ್ ನಲ್ಲಿ ಯಾರು ಯಾರು ಇರ್ತಾರೆ:
ಪಾಕಿಸ್ತಾನದ ದಕ್ಷಿಣ ಪಂಜಾಬ್ ಪ್ರಾಂತ್ಯದ ಸುಮಾರು 100 ಕಿಮೀ ದೂರದಲ್ಲಿರುವ ಬಹವಾಲ್‌ಪುರದ ಮರ್ಕಝ್ ಸುಭಾನಲ್ಲಾಹ್‌ನಲ್ಲಿರುವ ಜೆಎಂನ ಪ್ರಧಾನ ಕಚೇರಿಯನ್ನು ಭಾರತೀಯ ಸಶಸ್ತ್ರ ಪಡೆಗಳು ಮೇ 7 ರಂದು ಆಪರೇಷನ್ ಸಿಂಧೂರ್‌ನಲ್ಲಿ ಹೊಡೆದುರುಳಿಸಿದಾಗ ಆಕೆಯ ಪತಿ ಯೂಸುಫ್ ಅಜರ್ ಹತ್ಯೆಯಾಗಿತ್ತು.
ಜೆಇಎಂ ಕಮಾಂಡರ್‌ಗಳ ಪತ್ನಿಯರನ್ನು ಮತ್ತು ಬಹವಾಲ್‌ಪುರ್, ಕರಾಚಿ, ಮುಜಾಫರಾಬಾದ್, ಕೋಟ್ಲಿ, ಹರಿಪುರ ಮತ್ತು ಮನ್ಸೆಹ್ರಾದಲ್ಲಿನ ತನ್ನ ಕೇಂದ್ರಗಳಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ಈ ಗುಂಪಿನಲ್ಲಿ ಸೇರಿಸಿಕೊಳ್ಳಲು ಪ್ರಾರಂಭಿಸಿದೆ ಎಂದು ಮೂಲಗಳು ಹೇಳಿವೆ.
ಪ್ರೇರಣೆ ಏನು?
ಸಾಂಪ್ರದಾಯಿಕವಾಗಿ ಮಹಿಳೆಯರು ಶಸ್ತ್ರಸಜ್ಜಿತ ಅಥವಾ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದನ್ನು ಜೆಎಂ ನಿಷೇಧಿಸಿದೆ. ಭಾರತೀಯ ಸೇನೆಯ ಯಶಸ್ವಿ ಆಪರೇಷನ್ ಸಿಂಧೂರ್ ಜೊತೆಗೆ 26 ನಾಗರಿಕರ ಹತ್ಯೆಗೆ ಕಾರಣವಾದ ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಸಂಘಟನೆಯಲ್ಲಿ ಕಾರ್ಯತಂತ್ರದ ಬದಲಾವಣೆಯನ್ನು ಪ್ರೇರೇಪಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಆತ್ಮಾಹುತಿ ದಾಳಿಯಲ್ಲಿ ಮಹಿಳೆಯರ ಬಳಕೆ:
ಮಸೂದ್ ಅಜರ್ ಮತ್ತು ಆತನ ಸಹೋದರ ತಲ್ಹಾ ಅಲ್-ಸೈಫ್ ಅವರು ಜೆಇಎಂನ ಕಾರ್ಯಾಚರಣೆಯಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸುವುದನ್ನು ಅನುಮೋದಿಸಿದ್ದಾರೆ. ISIS ಉಗ್ರ ಸಂಘನೆಗಳಂತೆ ಮಹಿಳೆಯರನ್ನು ಯುದ್ಧ ಅಥವಾ ಆತ್ಮಾಹುತಿ ದಾಳಿಗಳಲ್ಲಿ ಬಳಸಿಕೊಳ್ಳಲು ಯೋಜಿಸಲಾಗಿದೆ. ಆಪರೇಷನ್ ಸಿಂಧೂರ್ ನಂತರ ಜೆಎಂ, ಮಿತ್ರ ಗುಂಪುಗಳಾದ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಮತ್ತು ಲಷ್ಕರ್-ಎ-ತೋಯ್ಬಾ (LET) ಜೊತೆಗೆ ತನ್ನ ಕಾರ್ಯಾಚರಣೆಯ ಭಾಗಗಳನ್ನು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ (ಕೆಪಿಕೆ) ಪ್ರಾಂತ್ಯಕ್ಕೆ ಸ್ಥಳಾಂತರಿಸಿದೆ ಎಂದು ಹೇಳಲಾಗುತ್ತದೆ.
ಭಯೋತ್ಪಾದಕರ ನೆಲೆ ಪುನರ್ ನಿರ್ಮಾಣ:
ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ನಾಶವಾದ ಭಯೋತ್ಪಾದಕರ ಮೂಲಸೌಕರ್ಯವನ್ನು ಪುನರ್ನಿರ್ಮಿಸಲು ಪಾಕಿಸ್ತಾನ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ. ದೇಶಾದ್ಯಂತ 313 ಹೊಸ ಮಾರ್ಕಾಜ್ (ತರಬೇತಿ ಮತ್ತು ಕಾರ್ಯಾಚರಣಾ ಕೇಂದ್ರಗಳು) ಸ್ಥಾಪಿಸಲು ಸುಮಾರು 3.91 ಶತಕೋಟಿ ರೂ. ಸಂಗ್ರಹಿಸುವ ಗುರಿಯೊಂದಿಗೆ EasyPaisa ಮೂಲಕ ಆನ್‌ಲೈನ್ ಪ್ರಚಾರ ಸೇರಿದಂತೆ ನಿಧಿಸಂಗ್ರಹಣೆಯ ಕಾರ್ಯಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಆನ್‌ಲೈನ್ ನೆಟ್‌ವರ್ಕ್‌ಗಳ ಮೂಲಕ ಜಮಾತ್-ಉಲ್-ಮೊಮಿನಾತ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಪ್ರಯತ್ನಿಸಬಹುದು ಎನ್ನಲಾಗಿದೆ. ಈ ಗುಂಪು ಸಾಮಾಜಿಕ ಮಾಧ್ಯಮ ವೇದಿಕೆಗಳು, ವಾಟ್ಸಾಪ್‌ನಂತಹ ಆ್ಯಪ್ ಗಳ ಮೂಲಕ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.