ಗಾಜಾ: ಕದನ ವಿರಾಮ ಬೆನ್ನಲ್ಲೇ ರಫಾದಲ್ಲಿ ಇಬ್ಬರು ಇಸ್ರೇಲಿ ಸೈನಿಕರ ಹತ್ಯೆಯ ನಂತರ ಗಾಜಾ ಪಟ್ಟಿಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇದು ಇಸ್ರೇಲ್ ಮತ್ತು ಹಮಾಸ್ ನಡುವಿನ ಇತ್ತೀಚಿನ ಕದನ ವಿರಾಮ ಒಪ್ಪಂದವನ್ನು ಅಪಾಯಕ್ಕೆ ಸಿಲುಕಿಸಿದೆ. ಒಂದು ವಾರದ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಕದನ ವಿರಾಮವನ್ನು ಜಾರಿಗೆ ಬಂದಿತ್ತು. ಆದಾಗ್ಯೂ, ಕೆಲವೇ ದಿನಗಳಲ್ಲಿ, ಪರಿಸ್ಥಿತಿ ಮತ್ತೆ ನಿಯಂತ್ರಣ ತಪ್ಪಿದಂತೆ ಕಾಣುತ್ತಿದೆ. ಭಾನುವಾರ ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಗಾಜಾದಲ್ಲಿ ಹಲವಾರು ವಾಯುದಾಳಿಯನ್ನು ನಡೆಸಿದ್ದು ಇದೀಗ ಪರಿಸ್ಥಿತಿ ಹದಗೆಟ್ಟಿದೆ. ದಕ್ಷಿಣ ನಗರವಾದ ರಫಾದಲ್ಲಿ ಇಬ್ಬರು ಇಸ್ರೇಲಿ ಸೈನಿಕರ ಹತ್ಯೆಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಈ ದಾಳಿಗಳನ್ನು ನಡೆಸಿದೆ. ಈ ದಾಳಿಗಳಲ್ಲಿ 45 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಸೈನಿಕರ ಹತ್ಯೆಗೆ ಹಮಾಸ್ ಕಾರಣ ಎಂದು ಇಸ್ರೇಲ್ ದೂಷಿಸಿದ್ದರೆ, ಹಮಾಸ್ ಈ ಆರೋಪವನ್ನು ನಿರಾಕರಿಸಿದೆ.
ಮಾರ್ಚ್‌ನಲ್ಲಿ ಸಂವಹನ ಕಡಿತಗೊಂಡಾಗಿನಿಂದ ಈ ಪ್ರದೇಶದ ಹೋರಾಟಗಾರರೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಹಮಾಸ್ ಹೇಳಿದೆ. ದಾಳಿಯ ನಂತರ ಇಸ್ರೇಲ್ ಗಾಜಾಗೆ ಪರಿಹಾರ ನೆರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಏತನ್ಮಧ್ಯೆ, ಅಧ್ಯಕ್ಷ ಟ್ರಂಪ್ ಅವರ ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಮತ್ತೆ ಈ ಪ್ರದೇಶಕ್ಕೆ ಆಗಮಿಸಿದ್ದಾರೆ. ಆದರೆ ಹಮಾಸ್ ಪ್ರತಿನಿಧಿಗಳು ಕೈರೋದಲ್ಲಿ ಈಜಿಪ್ಟ್ ಮಧ್ಯವರ್ತಿಗಳು ಮತ್ತು ಇತರ ಪ್ಯಾಲೆಸ್ಟೀನಿಯನ್ ಬಣಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಚರ್ಚೆಗಳ ಕೇಂದ್ರ ಬಿಂದು ಟ್ರಂಪ್ ಅವರ 20-ಅಂಶಗಳ ಶಾಂತಿ ಯೋಜನೆಯ ಎರಡನೇ ಹಂತವಾಗಿದೆ. ಇವುಗಳಲ್ಲಿ ಗಾಜಾದಲ್ಲಿ ಅಂತಾರಾಷ್ಟ್ರೀಯ ಪಡೆಗಳ ನಿಯೋಜನೆ, ಇಸ್ರೇಲಿ ಪಡೆಗಳನ್ನು ಕ್ರಮೇಣ ಹಿಂತೆಗೆದುಕೊಳ್ಳುವುದು ಮತ್ತು ಅಂತಿಮವಾಗಿ ಹಮಾಸ್‌ನ ನಿಶ್ಯಸ್ತ್ರೀಕರಣ ಸೇರಿವೆ. ಇತ್ತೀಚಿನ ಹಿಂಸಾಚಾರವು ಎರಡೂ ಕಡೆಯವರನ್ನು ತೀವ್ರವಾಗಿ ಬೆಚ್ಚಿಬೀಳಿಸಿದೆ.
ಸ್ಥಳೀಯ ಆಸ್ಪತ್ರೆಗಳ ಪ್ರಕಾರ, ಕನಿಷ್ಠ 45 ಪ್ಯಾಲೆಸ್ಟೀನಿಯನ್ನರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇಸ್ರೇಲಿ ಸೈನ್ಯವು ಡಜನ್ಗಟ್ಟಲೆ ಹಮಾಸ್ ಭಯೋತ್ಪಾದಕ ಗುರಿಗಳನ್ನು ಹೊಡೆದುರುಳಿಸಿರುವುದಾಗಿ ಹೇಳುತ್ತದೆ. ಆದರೆ ವಿವಿಧ ಸ್ಥಳಗಳಿಂದ ಬಂದ ಚಿತ್ರಗಳು ಮಕ್ಕಳು ಸೇರಿದಂತೆ ಹಲವಾರು ನಾಗರಿಕರ ಸಾವನ್ನು ತೋರಿಸುತ್ತಿವೆ.