ಸಿಡೋರ್ಜೊ: ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿದುಬಿದ್ದು, ಅವಶೇಷಗಳ ಅಡಿಯಲ್ಲಿ ಕನಿಷ್ಠ 65 ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಕಟ್ಟಡ ಕುಸಿದು 12 ಗಂಟೆಗಳಿಗೂ ಹೆಚ್ಚು ಸಮಯವಾಗಿದ್ದು, ಬದುಕುಳಿದವರನ್ನು ಬಿಡುಗಡೆ ಮಾಡಲು ರಕ್ಷಣಾ ಕಾರ್ಯಕರ್ತರು ಅವಿರತ ಶ್ರಮಿಸುತ್ತಿದ್ದಾರೆ. ಕುಸಿದ ಕಟ್ಟಡದ ಕಾಂಕ್ರೀಟ್ ಅವಶೇಷಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಆಮ್ಲಜನಕ ಮತ್ತು ನೀರನ್ನು ಪೂರೈಸುತ್ತಿದ್ದಾರೆ.
ಪೂರ್ವ ಜಾವಾ ಪಟ್ಟಣದ ಸಿಡೋರ್ಜೊದಲ್ಲಿರುವ ಅಲ್ ಖೋಜಿನಿ ಇಸ್ಲಾಮಿಕ್ ಬೋರ್ಡಿಂಗ್ ಶಾಲಾ ಕಟ್ಟಡ ಕುಸಿದು ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಬದುಕುಳಿದವರನ್ನು ಬಿಡುಗಡೆ ಮಾಡಲು ರಕ್ಷಣಾ ಕಾರ್ಯಕರ್ತರು, ಪೊಲೀಸರು ಮತ್ತು ಸೈನಿಕರು ಅವಿರತ ಶ್ರಮವಹಿಸುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಕ್ಷಣಾ ಕಾರ್ಯಕರ್ತರು ಹೇಳುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ಅಥವಾ ಕುಸಿದ ಕಟ್ಟಡದ ಬಳಿ ಜಮಾಯಿಸಿದ್ದ ವಿದ್ಯಾರ್ಥಿಗಳ ಕುಟುಂಬಸ್ಥರು ತಮ್ಮ ಮಕ್ಕಳು ಜೀವಂತವಾಗಿ ಹೊರಬರುವುದನ್ನು ಕಾಯುತ್ತಿದ್ದರು. ಪ್ರಾರ್ಥನಾ ಮಂದಿರದಿಂದ ಧೂಳಿನಿಂದ ತುಂಬಿದ, ಗಾಯಗೊಂಡ ವಿದ್ಯಾರ್ಥಿಗಳನ್ನು ರಕ್ಷಣಾ ಕಾರ್ಯಕರ್ತರು ಹೊರತೆಗೆಯುವುದನ್ನು ನೋಡುತ್ತಿದ್ದಾರೆ.
ಬೋರ್ಡಿಂಗ್ ಶಾಲಾ ಸಂಕೀರ್ಣದಲ್ಲಿ ಸ್ಥಾಪಿಸಲಾದ ಕಮಾಂಡ್ ಪೋಸ್ಟ್‌ನಲ್ಲಿರುವ ಸೂಚನಾ ಫಲಕದಲ್ಲಿ 65 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಲ್ಲಿ ಹೆಚ್ಚಾಗಿ ಏಳರಿಂದ ಹನ್ನೊಂದು ತರಗತಿಯವರೆಗಿನ, 12 ರಿಂದ 17 ವರ್ಷದೊಳಗಿನ ಮಕ್ಕಳಾಗಿದ್ದಾರೆ.
13 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, 99 ಮಂದಿ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ಕುಸಿತದ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಳೆಯ ಪ್ರಾರ್ಥನಾ ಮಂದಿರವು ಎರಡು ಅಂತಸ್ತುಗಳದ್ದಾಗಿತ್ತು ಆದರೆ ಪರವಾನಗಿ ಇಲ್ಲದೆ ಇನ್ನೆರಡು ಕಟ್ಟಡಗಳನ್ನು ಮೇಲೆ ಕಟ್ಟಲಾಗಿತ್ತು.