ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್- ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್  online desk
ವಿದೇಶ

ಟ್ರಂಪ್ ಹುಚ್ಚು ಮಾತಿಗೆ ಕೆರಳಿದ್ದ ಇರಾನ್; ಯಾರ ಮಾತನ್ನೂ ಕೇಳದ ಇಸ್ಲಾಮಿಕ್ ರೆಜಿಮ್ ನ್ನು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಗ್ಗಿಸಿದ್ದು ಹೇಗೆ?

ಈ ಹಂತದಲ್ಲಿ ಜೆಡಿ ವ್ಯಾನ್ಸ್ ‘ಶ್ಯಾಡೋ ಬ್ರೋಕರ್’ ಪಾತ್ರ ವಹಿಸಿ ಇರಾನ್ ಜೊತೆಗಿನ ಶಾಂತಿ ಒಪ್ಪಂದವನ್ನು ಹೇಗೆ ಸಾಧಿಸಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಸದ್ಯಕ್ಕೆ ಇರಾನ್- ಅಮೆರಿಕ ಯುದ್ಧಕ್ಕೆ ತಾತ್ಕಾಲಿಕ ಕದನ ವಿರಾಮ ಬಿದ್ದಿದೆ. ಇರಾನ್ ವಿರುದ್ಧ ಕೆಂಡ ಕಾರುತ್ತಿದ್ದ ಟ್ರಂಪ್ ಪ್ರತಿ ಹೇಳಿಕೆಗಳಲ್ಲೂ ಅಶ್ಲೀಲವಾಗಿ ನಿಂದಿಸುತ್ತಿದ್ದರಿಂದ ಇರಾನ್ ಅಮೆರಿಕ ಅಧ್ಯಕ್ಷರ ಯಾವ ಮಾತನ್ನೂ ಸ್ವೀಕರಿಸುವ ಹಂತದಲ್ಲಿ ಇರಲಿಲ್ಲ. ಆದರೂ ತಾತ್ಕಾಲಿಕ ಕದನ ವಿರಾಮಕ್ಕೆ ಇರಾನ್ ನ್ನು ಒಪ್ಪಿಸಿದ್ದು ಯಾರು? ಹೇಗೆ? ಎಂಬ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ.

ಅಮೆರಿಕಾ ಇರಾನ್ ವಿರುದ್ಧ ಕದನ ವಿರಾಮವನ್ನು ಘೋಷಿಸುವುದಕ್ಕೆ ಕಾರಣವಾಗಿದ್ದು, ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್! ಅಮೆರಿಕ ಯಾವಾಗಲೂ ಹಾಗೆಯೇ. ಅತ್ತ ಮಗುವನ್ನೂ ಚಿವುಟಿ ತೊಟ್ಟಿಲನ್ನೂ ತೂಗುವ ಕೆಲಸ ಮಾಡುವುದಕ್ಕೇ ಖ್ಯಾತಿ ಪಡೆದಿರುವ ರಾಷ್ಟ್ರ. ಇರಾನ್ ವಿಷಯದಲ್ಲಿ ಟ್ರಂಪ್-ವ್ಯಾನ್ಸ್ ಮಾಡಿದ್ದೂ ಇದನ್ನೇ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದೆಡೆ ಇರಾನ್ ನ್ನು ವಾಚಾಮಗೋಚರವಾಗಿ ನಿಂದಿಸುತ್ತಾ ಬೆದರಿಕೆ ಹಾಕುತ್ತಿದ್ದರೆ, ಮತ್ತೊಂದೆಡೆ ಅದೇ ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಯವಾಗಿ ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದರು.

ಈ ಹಂತದಲ್ಲಿ ಜೆಡಿ ವ್ಯಾನ್ಸ್ ‘ಶ್ಯಾಡೋ ಬ್ರೋಕರ್’ ಪಾತ್ರ ವಹಿಸಿ ಇರಾನ್ ಜೊತೆಗಿನ ಶಾಂತಿ ಒಪ್ಪಂದವನ್ನು ಹೇಗೆ ಸಾಧಿಸಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

“ಇಂದು ರಾತ್ರಿ ಒಂದು ಸಂಪೂರ್ಣ ನಾಗರಿಕತೆ ನಾಶವಾಗಲಿದೆ” ಎಂಬ ಡೊನಾಲ್ಡ್ ಟ್ರಂಪ್ ಅವರ ಹೆಚ್ಚುತ್ತಿದ್ದ ಆಕ್ರಮಣಕಾರಿ ಹೇಳಿಕೆಗಳ ನಡುವೆ, ಜೆಡಿ ವ್ಯಾನ್ಸ್, ಹಿನ್ನಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.

ವ್ಯಾನ್ಸ್ ಉರುಳಿಸಿದ್ದ ದಾಳದಲ್ಲಿ ಪಾಕಿಸ್ತಾನದ ಶೆಹಬಾಜ್ ಶರೀಫ್ ಅವರೊಂದಿಗೆ ಸೇರಿ ಆಯತೊಲ್ಲಾ ಮೊಜ್ತಬಾ ಖಮೆನೈ ಅವರನ್ನು ಮನವೊಲಿಸುವ ಪ್ರಯತ್ನವೂ ಒಳಗೊಂಡಿತ್ತು. ಯುದ್ಧ ವಿರಾಮ ಮಾತುಕತೆಯಲ್ಲಿ ವ್ಯಾನ್ಸ್ ಭಾಗಿಯಾಗಿದ್ದರು ಎಂಬುದು ಹೊಸ ವಿಷಯವಲ್ಲ; ಅಮೆರಿಕದ ಉಪಾಧ್ಯಕ್ಷರಾಗಿರುವ ಅವರು ಈ ಯುದ್ಧ ನಿರ್ಧಾರದಲ್ಲಿ ಭಾಗಿಯಾದ ಹಿರಿಯ ನಾಯಕತ್ವ ತಂಡದ ಅಂಗವಾಗಿರುವುದು ಸಹಜ.

ಕಳೆದ ವಾರ, ಮಾತುಕತೆಗಳಿಗೆ ಹತ್ತಿರದ ಮೂಲಗಳು ರಾಯಿಟರ್ಸ್‌ಗೆ ನೀಡಿದ ಮಾಹಿತಿಯ ಪ್ರಕಾರ, ಅವರು ಪಾಕಿಸ್ತಾನದ ಪ್ರಧಾನಿ ಶರೀಫ್ ಅವರೊಂದಿಗೆ ನೇರವಾಗಿ ಮಾತನಾಡಿದ್ದರು. ಆದರೆ ಈಗಿನ ವರದಿಗಳು, ಓಹಿಯೋದ ಮಿಡಲ್‌ಟೌನ್‌ನಿಂದ ಬಂದಿರುವ ಈ ವ್ಯಕ್ತಿ ನಿರ್ಣಾಯಕ ಪಾತ್ರ ವಹಿಸಿದ್ದಾರೆಯೆಂಬ ಸೂಚನೆ ನೀಡುತ್ತಿವೆ.

ವಿಶೇಷವಾಗಿ, ಟೆಹ್ರಾನ್ ನಲ್ಲಿದ್ದವರು ಸ್ಟೀವ್ ವಿಟ್ಕಾಫ್ (ಅಮೆರಿಕದ ವಿಶೇಷ ಪಶ್ಚಿಮ ಏಷ್ಯಾ ದೂತ) ಅಥವಾ ಅಧ್ಯಕ್ಷರ ಅಳಿಯ ಜಾರೆಡ್ ಕುಶ್ನರ್ ಸೇರಿದಂತೆ ಇತರ ಟ್ರಂಪ್ ಪ್ರತಿನಿಧಿಗಳಿಗಿಂತ ವ್ಯಾನ್ಸ್ ಅವರೊಂದಿಗೆ ವ್ಯವಹರಿಸುವುದನ್ನೇ ಹೆಚ್ಚು ಮೆಚ್ಚಿದ್ದರಿಂದ, ಅವರ ಪಾತ್ರ ಇನ್ನಷ್ಟು ಪ್ರಮುಖವಾಗಿತ್ತು ಎಂದು ಹೇಳಲಾಗಿದೆ.

ವ್ಯಾನ್ಸ್ ಆರಂಭದಿಂದಲೂ ಯುದ್ಧದ ಪರವಾದ ನಿಲುವು ಹೊಂದಿರಲಿಲ್ಲ. ಮಾರ್ಚ್ ಮಧ್ಯಭಾಗದಲ್ಲಿ, ಯುದ್ಧ ವಿರಾಮದ ಸಾಧ್ಯತೆ ದೂರದ ಕನಸಿನಂತೆ ಕಾಣುತ್ತಿದ್ದಾಗ, ವ್ಯಾನ್ಸ್ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹಾಗೂ ಯುಎಇ, ಸೌದಿ ಅರೇಬಿಯಾ ಸೇರಿದಂತೆ ಯುದ್ಧಕ್ಕೆ ಎಳೆಯಲ್ಪಟ್ಟ ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ಸರಣಿ ಮಾತುಕತೆಗಳನ್ನು ಆರಂಭಿಸಿದ್ದರು ಅಮೆರಿಕದ ಆಕ್ಸಿಯೊಸ್ ಪತ್ರಿಕೆ ವರದಿ ಮಾಡಿತ್ತು.

ಕನಿಷ್ಠ ಇನ್ನೂ ಮೂರು ಪ್ರಕಟಣೆಗಳು – ದಿ ನ್ಯೂಯಾರ್ಕ್ ಟೈಮ್ಸ್, ಪಾಲಿಟಿಕೊ ಮತ್ತು ದಿ ಹಿಲ್ – ಈಗಾಗಲೇ ಉಪಾಧ್ಯಕ್ಷ ವ್ಯಾನ್ಸ್ ಅವರನ್ನು ಇರಾನ್ ಯುದ್ಧದ ಬಗ್ಗೆ ತಟಸ್ಥ ನಿಲುವು ಹೊಂದಿರುವ ವ್ಯಕ್ತಿಯಾಗಿ ಗುರುತಿಸಿದ್ದವು.

ಇರಾಕ್‌ನಲ್ಲಿ ಯುದ್ಧ ಹೋರಾಡಿದ Marine Corps ನ ಮಾಜಿ ಸಿಬ್ಬಂದಿಯೂ ಆಗಿರುವ ವ್ಯಾನ್ಸ್, ಇಸ್ರೇಲ್‌ನ ‘ಆಡಳಿತ ಬದಲಾವಣೆ’ ಉದ್ದೇಶಕ್ಕೆ ಒಪ್ಪಿಗೆ ಹೊಂದಿರಲಿಲ್ಲ. ಪಶ್ಚಿಮ ಏಷ್ಯಾದಲ್ಲಿ ಮಿಲಿಟರಿ ಕ್ರಮ ಕೈಗೊಳ್ಳುವುದು “ವಿಶಾಲ ಪ್ರಮಾಣದ ಸಂಪನ್ಮೂಲ ವ್ಯತ್ಯಯ” ಮತ್ತು ಅಮೆರಿಕಕ್ಕೆ “ಅತಿಯಾಗಿ ವೆಚ್ಚದಾಯಕ” ಎಂದು ಭಾವಿಸಿದ್ದರೆಂದು ವರದಿಯಾಗಿದೆ.

ಗಡುವು ಸಮೀಪಿಸುತ್ತಿದ್ದಂತೆ ಟ್ರಂಪ್ ಅವರ ಬೆಂಬಲ ನಿರ್ಣಾಯಕವಾಗಿತ್ತು. ಈ ಅಭಿಪ್ರಾಯಗಳನ್ನು ಟ್ರಂಪ್ ಅವರಿಗೆ ತಿಳಿಸಿದ್ದರೂ, ಅವರು ತಮ್ಮ ನಿರ್ಧಾರ ಬದಲಿಸಿಕೊಳ್ಳದ ಪರಿಣಾಮ ಯುದ್ಧ ಆರಂಭವಾಯಿತು. ಹಾಗೆಂದು ಟ್ರಂಪ್ ವ್ಯಾನ್ಸ್ ಅವರನ್ನು ತಮ್ಮ ಆಪ್ತ ವಲಯದಿಂದ ಹೊರಗಿಟ್ಟಿಲ್ಲ. ಸೋಮವಾರ ಟ್ರಂಪ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, “ಮಾರ್ಕೋ (ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ), ಜೆಡಿ (ವ್ಯಾನ್ಸ್)… ಯುದ್ಧ ವಿರಾಮ ಮಾತುಕತೆಗಳನ್ನು ನೋಡಿಕೊಳ್ಳುತ್ತಿರುವ ಹಲವರು ನಮ್ಮ ಬಳಿ ಇದ್ದಾರೆ” ಎಂದು ಹೇಳಿದ್ದು ಇದಕ್ಕೆ ಸಾಕ್ಷಿಯಾಯಿತು.

ಇಷ್ಟೆಲ್ಲದರ ನಡುವೆ ಟ್ರಂಪ್ ಇರಾನ್‌ ವಿರುದ್ಧ ಅನೇಕ ಅವಮಾನಕಾರಿ ಹೇಳಿಕೆಗಳು ಮತ್ತು ಭಯಾನಕ ಬೆದರಿಕೆಗಳನ್ನು ಹೊರಹಾಕಿದ್ದರು. ಸಂಪೂರ್ಣ ಪಶ್ಚಿಮ ಏಷ್ಯಾ ಪ್ರದೇಶವೇ ಭೀಕರ ಏರಿಳಿತದ ಅಂಚಿನಲ್ಲಿತ್ತು. ಟ್ರಂಪ್ ಗಡುವು ಮುಗಿಯಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಇನ್ನೂ ಒಂದು ಹಂತ ಮುಂದೆ ಹೋಗಿ, “ಇಂದು ರಾತ್ರಿ ಒಂದು ಸಂಪೂರ್ಣ ನಾಗರಿಕತೆ ನಾಶವಾಗಲಿದೆ, ಮತ್ತೆ ಎಂದಿಗೂ ಮರಳಿ ಸಹಜ ಸ್ಥಿತಿಗೆ ಬರುವುದಿಲ್ಲ. ನಾನು ಹಾಗಾಗಬಾರದೆಂದು ಬಯಸುತ್ತೇನೆ, ಆದರೆ ಬಹುಶಃ ಹಾಗೇ ಆಗಬಹುದು,” ಎಂದು ಹೇಳಿದ್ದರು. ಇರಾನ್ ಕೂಡ ಅದೇ ತೀವ್ರತೆಯಿಂದ ಪ್ರತಿಕ್ರಿಯಿಸಿತ್ತು. ಇತ್ತ ಜೆಡಿ ವ್ಯಾನ್ಸ್, ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಂ ಮುನೀರ್, ಶರೀಫ್ ಮತ್ತು ಇರಾನ್ ಅಧಿಕಾರಿಗಳೊಂದಿಗೆ ಸೇರಿ ಕದನ ವಿರಾಮ ಒಪ್ಪಂದವನ್ನು ರೂಪಿಸುವ ಕೆಲಸದಲ್ಲಿ ತೊಡಗಿದ್ದರು.

ಇಲ್ಲಿಯೇ ಟ್ರಂಪ್ ಸೋಮವಾರ ನೀಡಿದ ಬೆಂಬಲದ ಮಹತ್ವ ಬಹುಶಃ ನಿರ್ಣಾಯಕವಾಗಿತ್ತು. ಇದಕ್ಕೂ ಮುನ್ನ ಟ್ರಂಪ್‌ನ ಹಠಾತ್ ನಿಲುವು ಬದಲಾವಣೆಗಳಿಂದ ಇರಾನ್ ಎರಡು ಬಾರಿ ತೀವ್ರವಾಗಿ ಪೆಟ್ಟು ತಿಂದಿತ್ತು.

ಮೊದಲ ಬಾರಿ 2025ರ ಜೂನ್‌ನಲ್ಲಿ, 12 ದಿನಗಳ ಯುದ್ಧಕ್ಕೂ ಮುನ್ನ, ಮತ್ತೊಮ್ಮೆ ಇತ್ತೀಚಿನ ಹೋರಾಟದ ಸನ್ನಾಹದ ಸಮಯದಲ್ಲಿ. ಪ್ರತಿ ಬಾರಿ, ಮಾತುಕತೆಯಲ್ಲಿ ಪ್ರಗತಿ ಕಂಡರೂ ಅಮೆರಿಕಾ ದಾಳಿ ನಡೆಸಿದೆ ಎಂದು ಇರಾನ್ ಭಾವಿಸಿತು; ಇದರಿಂದ ವಿತ್ಕಾಫ್ ಮತ್ತು ಕುಶ್ನರ್‌ ಮೇಲೆ ಇರಾನ್ ಗೆ ಇದ್ದ ನಂಬಿಕೆ ಕುಸಿದು, ದ್ರೋಹದ ಭಾವನೆ ಗಾಢವಾಗಿತ್ತು.

ವಾಸ್ತವವಾಗಿ, ಫೆಬ್ರವರಿ 26ರಂದು ಜಿನೀವಾದಲ್ಲಿ ನಡೆದ ಮಾತುಕತೆ ವಿಫಲವಾದ ನಂತರ, ಇರಾನ್ ಇವರಿಬ್ಬರೊಂದಿಗೆ ಯಾವುದೇ ರೀತಿಯ ವ್ಯವಹಾರ ನಡೆಸುವುದನ್ನು ಸ್ಪಷ್ಟವಾಗಿ ತಿರಸ್ಕರಿಸಿತು. ವ್ಯಾನ್ಸ್, ಮತ್ತೊಂದೆಡೆ, ಯುದ್ಧದ ಬಗ್ಗೆ ತಟಸ್ಥ ವ್ಯಕ್ತಿಯಾಗಿ ಇರಾನ್ ಗೆ ಕಾಣತೊಡಗಿದ್ದರು ಮತ್ತು ಟ್ರಂಪ್‌ ಜೊತೆ ನೇರ ಸಂಪರ್ಕ ಹೊಂದಿದ್ದ ವ್ಯಕ್ತಿಯಾಗಿದ್ದರು. ಈ ವೇಳೆಗೆ ಕದನ ವಿರಾಮದ ಪ್ರಯತ್ನಗಳಿಗೆ ಅಮೆರಿಕಾ ಆಡಳಿತವೂ ವ್ಯಾನ್ಸ್‌ನ್ನೇ ತನ್ನ ಅತ್ಯುತ್ತಮ ಆಯ್ಕೆಯೆಂದು ಪರಿಗಣಿಸತೊಡಗಿತ್ತು.

“ಇರಾನಿಯರು ಅಂತಿಮವಾಗಿ ವ್ಯಾನ್ಸ್ ಜೊತೆಗೂ ಒಪ್ಪಂದಕ್ಕೆ ಬರಲಿಲ್ಲ ಅಂದರೆ, ಅವರಿಗೆ ಒಪ್ಪಂದದ ಬಾಗಿಲು ಮುಚ್ಚಿದಂತೆಯೇ ಆಗುತ್ತದೆ. ಅವರಿಗೀಗ ಸಿಗಬಹುದಾದ ಅತ್ಯುತ್ತಮ ವ್ಯಕ್ತಿ ಆತನೆ,” ಎಂದು ಟ್ರಂಪ್ ಆಡಳಿತದ ಒಬ್ಬ ಹಿರಿಯ ಅಧಿಕಾರಿ ಆಕ್ಸಿಯೊಸ್‌ಗೆ ಹೇಳಿದ್ದು ಗಮನಾರ್ಹವಾಗಿದೆ.

ಕದನ ವಿರಾಮಕ್ಕೆ ಒಪ್ಪದೇ ಇದ್ದರೆ ಸಾರ್ವಜನಿಕ ಮೂಲಸೌಕರ್ಯ ಮತ್ತು ಇಂಧನ ಸೌಕರ್ಯಗಳ ಮೇಲೆ ದಾಳಿಗಳನ್ನು ಹೆಚ್ಚಿಸಲು ಟ್ರಂಪ್ ಸಿದ್ಧರಿದ್ದಾರೆ, ನೀವು ಒಪ್ಪಂದಕ್ಕೆ ಸಮ್ಮತಿಸಬೇಕೆಂದು ಜೆಡಿ ವ್ಯಾನ್ಸ್ ಒತ್ತಾಯಿಸಿ, ಎಚ್ಚರಿಸಿದಾಗ, ಇರಾನ್ ಅದನ್ನು ಗಂಭೀರವಾಗಿ ಪರಿಗಣಿಸಿತು. ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಪರಿಣಾಮ, ವ್ಯಾನ್ಸ್‌ನ ಪ್ರತಿಷ್ಠೆ ಅಮೆರಿಕಾ ಆಡಳಿತದೊಳಗೆ ಹೆಚ್ಚಾಗಿದೆ ಮತ್ತು ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿರುವ ಮಾತುಕತೆ ಸೇರಿದಂತೆ, ಇರಾನ್‌ ಜೊತೆ ನಡೆಯುವ ಮುಂದಿನ ಯಾವುದೇ ಸಂಭಾಷಣೆಯಲ್ಲೂ ವ್ಯಾನ್ಸ್ ಬಹುತೇಕ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮಕ್ಕಾಗಿ ಇರಾನ್ ಬೇಡಿಕೊಳ್ಳುತ್ತಿತ್ತು; ಟೆಹ್ರಾನ್‌ಗೆ ಬೇರೆ ದಾರಿ ಇರಲಿಲ್ಲ: ಅಮೆರಿಕದ ಯುದ್ಧ ಕಾರ್ಯದರ್ಶಿ

ಅಸ್ಸಾಂ ಕಾಂಗ್ರೆಸ್‌ಗೆ ದೊಡ್ಡ ಶಾಕ್: ನಾಳೆ ಮತದಾನ.., ಇಂದು ಕಣದಿಂದ ಹಿಂದೆ ಸರಿದ ಅಭ್ಯರ್ಥಿ ಸುರೇನ್ ಡೈಮರಿ!

Iran War ಕದನ ವಿರಾಮ: Indian Stock Market ಭಾರಿ ಏರಿಕೆ; 16 ಲಕ್ಷ ಕೋಟಿ ರೂ ಲಾಭ!

ನಾಳೆ ಯೋಗೇಶ್‌ ಗೌಡ ಕೊಲೆ ಪ್ರಕರಣದ ತೀರ್ಪು: ಮಾಜಿ ಸಚಿವ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ

ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸುವ ದೇಶಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸುತ್ತೇವೆ: ಟ್ರಂಪ್ ಹೊಸ ಬೆದರಿಕೆ

SCROLL FOR NEXT