ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದು, "ಇದೀಗ ನಡೆಯುತ್ತಿರುವ ಮಾತುಕತೆಯೇ ಇರಾನ್‌ಗೆ ಕೊನೆಯ ಅವಕಾಶ. ಉತ್ತಮ ಒಪ್ಪಂದಕ್ಕೆ ಈಗಲೇ ಸಹಿ ಹಾಕದಿದ್ದರೆ ಅಮೆರಿಕದ ದಾಳಿಗಳು ಮತ್ತಷ್ಟು ತೀವ್ರಗೊಳ್ಳಬಹುದು" ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಜೊತೆಗೆ ಮಾತುಕತೆಗಳು ಈಗಾಗಲೇ ನಡೆಯುತ್ತಿವೆ ಮತ್ತು ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಮಹತ್ವದ ಹಂತ ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಈ ಮಾತುಕತೆಗಳ ಮೊದಲ ಗುರಿ ವಿಶ್ವದ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾಗಿರುವ ಹeರ್ಮುಜ್ ಜಲಸಂಧಿ (Strait of Hormuz) ಅನ್ನು ಸಂಪೂರ್ಣವಾಗಿ ತೆರೆಯುವುದು. ಎರಡನೇ ಹಂತದಲ್ಲಿ ಇರಾನ್‌ನ ಅಣು ಕಾರ್ಯಕ್ರಮಕ್ಕೆ ಅಂತ್ಯ ಹಾಡುವ ಕುರಿತು ಒಪ್ಪಂದ ರೂಪಿಸುವುದು. "ಮೊದಲು ಜಲಸಂಧಿ ತೆರೆಯಬೇಕು. ನಂತರ ಅಣ್ವಸ್ತ್ರ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ. ಅದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಭಾನುವಾರ ಅಮೆರಿಕ ಸೇನೆ ಇರಾನ್ ಮೇಲೆ 'ಎರಡನೇ ಮಹಾಯುದ್ಧದ ಬಳಿಕದ ಅತಿದೊಡ್ಡ ದಾಳಿ' ನಡೆಸಲು ಸಂಪೂರ್ಣ ಸಿದ್ಧವಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಆ ಕಾರ್ಯಾಚರಣೆಯನ್ನು ರದ್ದುಗೊಳಿಸಿ ರಾಜತಾಂತ್ರಿಕ ಮಾತುಕತೆಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಲಾಯಿತು.
ಈ ನಿರ್ಧಾರಕ್ಕೆ ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಾಯಕರ ಮನವಿಯೇ ಪ್ರಮುಖ ಕಾರಣ ಎಂದು ಟ್ರಂಪ್ ತಿಳಿಸಿದ್ದಾರೆ.
ವಿಶೇಷವಾಗಿ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ನಡೆದ ದೂರವಾಣಿ ಸಂಭಾಷಣೆ ನಿರ್ಧಾರ ಬದಲಿಸಲು ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ಸೌದಿ ಯುವರಾಜರು ಟ್ರಂಪ್‌ಗೆ, ಅಮೆರಿಕ ಮತ್ತಷ್ಟು ದಾಳಿ ನಡೆಸಿದರೆ ಪ್ರತೀಕಾರವಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ. ಇದರಿಂದ ಜಾಗತಿಕ ತೈಲ ಮಾರುಕಟ್ಟೆ ಹಾಗೂ ಆರ್ಥಿಕತೆಗೆ ತೀವ್ರ ಹೊಡೆತ ಬೀಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೌದಿ ಅರೇಬಿಯಾ, ಕತಾರ್ ಹಾಗೂ ಯುಎಇ ತಮ್ಮ ಭದ್ರತೆಯನ್ನು ಕಾಪಾಡಿಕೊಳ್ಳಲು ಸಮರ್ಥವಾಗಿದ್ದರೂ, ಕುವೈತ್ ಮೇಲೆ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ದಾಳಿ ನಡೆಸುವ ಅಪಾಯ ಹೆಚ್ಚಿದೆ ಎಂಬ ಆತಂಕವನ್ನು ಕೂಡ ವ್ಯಕ್ತಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಇರಾನ್ ತನ್ನ ಮತ್ತು ಒಮಾನ್ ನಡುವಿನ ಮಾತುಕತೆಗಳು ಕೇವಲ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ನೌಕಾಯಾನಕ್ಕೆ ಸಂಬಂಧಿಸಿದವು ಮಾತ್ರ ಎಂದು ಹೇಳಿರುವುದಕ್ಕೆ ಟ್ರಂಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾತುಕತೆಗೆ ಅವರೇ ಮನವಿ ಮಾಡುತ್ತಾರೆ. ಬಳಿಕ ಯಾವುದೇ ಚರ್ಚೆಯೇ ನಡೆಯುತ್ತಿಲ್ಲ ಎಂದು ಸಾರ್ವಜನಿಕವಾಗಿ ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಇರಾನ್‌ನ ಅಣು ಕಾರ್ಯಕ್ರಮದ ಕುರಿತೇ ಮಾತುಕತೆ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.
ಈ ನಡುವೆ ಇರಾನ್ ವಿಚಾರದಲ್ಲಿ ಟ್ರಂಪ್ ಅವರ ನಿಲುವು ಪದೇ ಪದೇ ಬದಲಾಗುತ್ತಿರುವುದಕ್ಕೆ ವಿರೋಧ ಪಕ್ಷದ ನಾಯಕರು ಮತ್ತು ವಿಶ್ಲೇಷಕರು ಟೀಕಿಸಿದ್ದಾರೆ.
ಡೆಮಾಕ್ರಾಟ್ ಪಕ್ಷದ ಸೆನೆಟರ್ ಮಾರ್ಕ್ ಕೆಲ್ಲಿ, "ಟ್ರಂಪ್ ಅವರ ನಡೆ ಅತ್ಯಂತ ಅನಿಶ್ಚಿತವಾಗಿದೆ. ಮೊದಲು ಭಾರೀ ಯುದ್ಧದ ಬೆದರಿಕೆ ಹಾಕುತ್ತಾರೆ, ನಂತರ ಮಾತುಕತೆಗೆ ಮರಳುತ್ತಾರೆ. ಈಗ ಅವರು ಮತ್ತೆ ಫೆಬ್ರವರಿ ಸ್ಥಿತಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಅವರ ಬಳಿ 'ರೀಸೆಟ್' ಬಟನ್ ಇದ್ದರೆ ಖಂಡಿತ ಒತ್ತುತ್ತಿದ್ದರು," ಎಂದು ವ್ಯಂಗ್ಯವಾಡಿದ್ದಾರೆ.
ಇರಾನ್ ವಿರುದ್ಧ ಟ್ರಂಪ್ ಕಠಿಣ ಎಚ್ಚರಿಕೆ ನೀಡಿ ಬಳಿಕ ಹಿಂದೆ ಸರಿದಿರುವುದು ಇದೇ ಮೊದಲಲ್ಲ. ಏಪ್ರಿಲ್‌ನಲ್ಲಿ, ಇರಾನ್ ದಾಳಿ ಎದುರಿಸಬೇಕೆಂದು ಗಡುವು ನೀಡಿದ್ದ ಟ್ರಂಪ್, ಕೊನೆಯ ಕ್ಷಣದಲ್ಲಿ ಎರಡು ವಾರಗಳ ಯುದ್ಧ ವಿರಾಮ ಘೋಷಿಸಿದ್ದರು.
ಮೇ ತಿಂಗಳಲ್ಲಿ, ಗಲ್ಫ್ ರಾಷ್ಟ್ರಗಳ ಮನವಿಯ ಮೇರೆಗೆ ಇರಾನ್ ಮೇಲಿನ ಭಾರೀ ದಾಳಿಯನ್ನು ರದ್ದುಪಡಿಸಿ ಮಾತುಕತೆಗೆ ಆದ್ಯತೆ ನೀಡಿದ್ದರು.
ಜೂನ್‌ನಲ್ಲಿ, ಇರಾನ್‌ನ ತೈಲ ಮೂಲಸೌಕರ್ಯವನ್ನು ಗುರಿಯಾಗಿಸಿ ಭಾರೀ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರೂ, ನಂತರ ಶಾಂತಿ ಮಾತುಕತೆ ಮುಂದುವರಿದ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟಿದ್ದರು.
ಯುದ್ಧಕ್ಕೆ ಅಮೆರಿಕದಲ್ಲೇ ವಿರೋಧ
ಇರಾನ್ ವಿರುದ್ಧದ ಯುದ್ಧ ಈಗಾಗಲೇ ಹಲವು ತಿಂಗಳುಗಳಿಂದ ಮುಂದುವರಿದಿದ್ದು, ಅಮೆರಿಕದಲ್ಲಿಯೂ ಜನರ ಬೆಂಬಲ ಕುಸಿಯುತ್ತಿದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ಸುಮಾರು ಎರಡು-ಮೂರನೇ ಭಾಗದ ಅಮೆರಿಕನ್ನರು ಈ ಯುದ್ಧ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ರಿಪಬ್ಲಿಕನ್ ಪಕ್ಷದ ಬೆಂಬಲಿಗರಲ್ಲಿಯೂ ಗಣನೀಯ ಸಂಖ್ಯೆಯವರು ಯುದ್ಧ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಿಪಬ್ಲಿಕನ್ ಸೆನೆಟರ್ ಜಾನ್ ಕೆನೆಡಿ ಕೂಡ, "ಇರಾನ್ ವಿರುದ್ಧ ಈಗಿರುವ ನಿರ್ಬಂಧಗಳು ಮತ್ತು ಅಣು ಕಾರ್ಯಕ್ರಮದ ಮೇಲೆ ಒತ್ತಡ ಮುಂದುವರಿಸುವುದು ಉತ್ತಮ. ಯುದ್ಧವನ್ನು ಮತ್ತಷ್ಟು ವಿಸ್ತರಿಸಿದರೆ ಇಂಧನ ಬೆಲೆ ಏರಿಕೆ ಹಾಗೂ ಹಣದುಬ್ಬರ ಹೆಚ್ಚಾಗುವ ಅಪಾಯವಿದೆ," ಎಂದು ಹೇಳಿದ್ದಾರೆ.
ಇದೀಗ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಮುಂದಿನ ಕೆಲ ದಿನಗಳಲ್ಲಿ ನಿರ್ಣಾಯಕ ಹಂತ ತಲುಪುವ ಸಾಧ್ಯತೆ ಇದೆ. ಒಂದು ಕಡೆ ಟ್ರಂಪ್ "ಇದು ಕೊನೆಯ ಅವಕಾಶ" ಎಂದು ಎಚ್ಚರಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಇರಾನ್ ಕೂಡ ತನ್ನ ನಿಲುವಿನಲ್ಲಿ ಬದಲಾವಣೆ ತರದಿದ್ದರೆ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಭಾರೀ ಸೇನಾ ಸಂಘರ್ಷದ ಭೀತಿ ಹೆಚ್ಚಾಗುವ ಸಾಧ್ಯತೆ ಇದೆ.
ಹಾರ್ಮುಜ್ ಜಲಸಂಧಿಯ ಭವಿಷ್ಯ, ಇರಾನ್‌ನ ಅಣು ಕಾರ್ಯಕ್ರಮ ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಸ್ಥಿರತೆ ಈ ಮೂರು ವಿಷಯಗಳು ಮುಂದಿನ ಬೆಳವಣಿಗೆಗಳಲ್ಲಿ ಅತ್ಯಂತ ನಿರ್ಣಾಯಕವಾಗಲಿವೆ.