Iran ಮೇಲಿನ ದಾಳಿ ತಡೆಗೆ ಗಲ್ಫ್ ರಾಷ್ಟ್ರಗಳ ಸಲಹೆಯೇ ಪ್ರಮುಖ ಕಾರಣ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನಾನು ಯುವರಾಜರನ್ನು, 'ನಾವು ದಾಳಿ ನಡೆಸಬೇಕೇ ಅಥವಾ ಬೇಡವೇ?' ಎಂದು ಕೇಳಿದೆ. ಅದಕ್ಕೆ ಅವರು, 'ದಾಳಿಗಿಂತ ಒಪ್ಪಂದವೇ ಉತ್ತಮ. ಯುದ್ಧ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ' ಎಂದು ಹೇಳಿದ್ದರು. ಅವರ ಅಭಿಪ್ರಾಯವೇ ನನ್ನ ನಿರ್ಧಾರಕ್ಕೆ ಪ್ರಮುಖ ಕಾರಣವಾಯಿತು.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಇರಾನ್ ದೇಶದ ಮೇಲೆ ನಡೆಸಲು ಉದ್ದೇಶಿಸಲಾಗಿದ್ದ ಭಾರೀ ಸೇನಾ ದಾಳಿಯ ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಪ್ರಮುಖ ಗಲ್ಫ್ ಮಿತ್ರರಾಷ್ಟ್ರಗಳ ನಾಯಕರು ನೀಡಿದ ಮಹತ್ವದ ಸಲಹೆ ಮತ್ತು ನೇರ ಮಧ್ಯಸ್ಥಿಕೆಯ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಭಾನುವಾರ ನ್ಯೂಜೆರ್ಸಿಯ ಬೆಡ್‌ಮಿನ್ಸ್ಟರ್‌ನಲ್ಲಿರುವ ತಮ್ಮ ಗಾಲ್ಫ್ ಕ್ಲಬ್‌ನಿಂದ ವಾಷಿಂಗ್ಟನ್‌ಗೆ ಮರಳುವ ವೇಳೆ ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಎರಡನೇ ವಿಶ್ವಯುದ್ಧದ ಬಳಿಕ ಅತಿದೊಡ್ಡ ದಾಳಿಯನ್ನು ಭಾನುವಾರವೇ ನಡೆಸುವ ಯೋಜನೆ ಸಿದ್ಧವಾಗಿತ್ತು. ಆದರೆ, ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ನಡೆದ ಮಾತುಕತೆಯ ನಂತರ ದಾಳಿಯನ್ನು ಸ್ಥಗಿತಗೊಳಿಸಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಇನ್ನಷ್ಟು ಸಮಯ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಾನು ಯುವರಾಜರನ್ನು, 'ನಾವು ದಾಳಿ ನಡೆಸಬೇಕೇ ಅಥವಾ ಬೇಡವೇ?' ಎಂದು ಕೇಳಿದೆ. ಅದಕ್ಕೆ ಅವರು, 'ದಾಳಿಗಿಂತ ಒಪ್ಪಂದವೇ ಉತ್ತಮ. ಯುದ್ಧ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ' ಎಂದು ಹೇಳಿದ್ದರು. ಅವರ ಅಭಿಪ್ರಾಯವೇ ನನ್ನ ನಿರ್ಧಾರಕ್ಕೆ ಪ್ರಮುಖ ಕಾರಣವಾಯಿತು" ಎಂದು ವಿವರಿಸಿದರು.

ಶನಿವಾರ ಟ್ರಂಪ್ ಮತ್ತು ಸೌದಿ ಯುವರಾಜರ ನಡುವೆ ದೂರವಾಣಿ ಮಾತುಕತೆ ನಡೆದಿತ್ತು. ಅದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್, ಮಧ್ಯಪ್ರಾಚ್ಯ ರಾಷ್ಟ್ರಗಳು ಐದು ತಿಂಗಳಿನಿಂದ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಹಾಡುವ ಒಪ್ಪಂದದ ರೂಪುರೇಷೆಗಳನ್ನು ತಲುಪಿವೆ ಎಂದು ಘೋಷಿಸಿದ್ದರು. ಆದರೆ, ಅದಕ್ಕೂ ಒಂದು ದಿನ ಮೊದಲು ಟ್ರಂಪ್ ಇರಾನ್‌ನೊಂದಿಗೆ ನಡೆಯುತ್ತಿರುವ ಮಾತುಕತೆಗಳ ಬಗ್ಗೆ "ನಂಬಿಕೆ ಕಳೆದುಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದಲ್ಲದೆ, ಅಮೆರಿಕ ಸೇನೆ ಇರಾನ್ ಮೇಲೆ "ಅತ್ಯಂತ ತೀವ್ರ ದಾಳಿ" ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಇರಾನ್‌ನ ಅಣ್ವಸ್ತ್ರ ಯೋಜನೆ ಕುರಿತ ಅಮೆರಿಕದ ಆತಂಕಗಳನ್ನು ಪರಿಹರಿಸುವುದು ಹಾಗೂ ಜಾಗತಿಕ ಇಂಧನ ಸರಬರಾಜಿಗೆ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಕ್ತಗೊಳಿಸುವುದು ಪ್ರಸ್ತಾವಿತ ಒಪ್ಪಂದದ ಪ್ರಮುಖ ಅಂಶಗಳಾಗಿವೆ.

ಜಾಗತಿಕವಾಗಿ ಸಾಗಾಟವಾಗುವ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗ ಈ ಜಲಸಂಧಿಯ ಮೂಲಕ ಸಾಗುತ್ತದೆ. ಯುದ್ಧ ಆರಂಭವಾದ ನಂತರ ಈ ಮಾರ್ಗದಲ್ಲಿ ಸಂಚಾರ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.

Donald Trump
ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

ಆದರೆ, ಇರಾನ್ ಮಾತ್ರ ಈ ವಿಷಯದಲ್ಲಿ ವಿಭಿನ್ನ ನಿಲುವು ವ್ಯಕ್ತಪಡಿಸಿದೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯಿ, "ಹಾರ್ಮುಜ್ ಜಲಸಂಧಿ ಫೆಬ್ರವರಿ 28ರ ಹಿಂದಿನ ಸ್ಥಿತಿಗೆ ಯಾವುದೇ ಕಾರಣಕ್ಕೂ ಮರಳುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಒಮಾನ್ ಜೊತೆ ಸಮುದ್ರ ಮಾರ್ಗದ ಸಂಚಾರದ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ತಿಳಿಸಿದ್ದಾರೆ.

ಇರಾನ್ ರಕ್ಷಣಾ ಸಚಿವರೂ ಕೂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿ, ಟ್ರಂಪ್ ಅವರ ಘೋಷಣೆಯಿಂದ ಇರಾನ್ ಅಚ್ಚರಿಗೊಂಡಿಲ್ಲ ಮತ್ತು ಯಾವುದೇ ಬೆದರಿಕೆಯನ್ನು ಎದುರಿಸಲು ಸಂಪೂರ್ಣ ಸಜ್ಜಾಗಿದೆ ಎಂದು ಹೇಳಿದ್ದಾರೆ.

ದೇಶದೊಳಗೆ ಅಮೆರಿಕದೊಂದಿಗೆ ಯಾವುದೇ ರೀತಿಯ ಮಾತುಕತೆಯನ್ನು ವಿರೋಧಿಸುವ ಗುಂಪು ಮತ್ತು ಸೇನಾ ಒತ್ತಡದ ಮೂಲಕ ಉತ್ತಮ ಒಪ್ಪಂದ ಸಾಧಿಸಬೇಕೆಂದು ಬಯಸುವ ಮತ್ತೊಂದು ಗುಂಪಿನ ನಡುವೆ ಭಿನ್ನಾಭಿಪ್ರಾಯಗಳಿರುವ ವರದಿಗಳೂ ಹೊರಬಂದಿವೆ.

ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಸೋಮವಾರ ಮಧ್ಯಾಹ್ನದಿಂದ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ. ಯಾರು ಭಾಗವಹಿಸಲಿದ್ದಾರೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಆದರೆ, ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರಾದೇಶಿಕ ಅಧಿಕಾರಿಯೊಬ್ಬರ ಪ್ರಕಾರ, ಹೊಸ ಪ್ರಸ್ತಾವನೆಯಲ್ಲಿ ಅಮೆರಿಕ ಮತ್ತು ಇರಾನ್ ಮತ್ತೆ ಮಾತುಕತೆ ಆರಂಭಿಸಿ ಬಾಕಿ ಉಳಿದಿರುವ ಪ್ರಮುಖ ವಿವಾದಾತ್ಮಕ ವಿಷಯಗಳನ್ನು ಬಗೆಹರಿಸಲು ಒಪ್ಪಿಕೊಳ್ಳಲಿವೆ.

ಈ ಕರಡು ಒಪ್ಪಂದದ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರವನ್ನು ಪುನಃ ಆರಂಭಿಸುವುದು, ಇರಾನ್ ಬೆಂಬಲಿತ ಇರಾಕ್‌ನ ಶಸ್ತ್ರಸಜ್ಜಿತ ಗುಂಪುಗಳು ಸೇರಿದಂತೆ ಪ್ರದೇಶದಲ್ಲಿನ ದಾಳಿಗಳನ್ನು ಸ್ಥಗಿತಗೊಳಿಸುವುದು ಹಾಗೂ ಪ್ರತಿಯಾಗಿ ಅಮೆರಿಕ ಇರಾನ್ ಮೇಲಿನ ತನ್ನ ನೌಕಾ ನಿರ್ಬಂಧವನ್ನು ಸಡಿಲಿಸಿ ತೈಲ ರಫ್ತಿಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಆದರೆ, ಈವರೆಗೆ ಯಾವುದೇ ಅಂತಿಮ ಒಪ್ಪಂದಕ್ಕೆ ಸಹಿ ಆಗಿಲ್ಲ. ಮಧ್ಯಸ್ಥಿಕೆ ಪ್ರಯತ್ನಗಳು ಮಾತ್ರ ಮುಂದುವರಿದಿವೆ.

ಈ ನಡುವೆ ಜೂನ್‌ನಲ್ಲಿ ಒಪ್ಪಿಕೊಂಡಿದ್ದ ಕದನ ವಿರಾಮದ ಬದ್ಧತೆಯನ್ನು ಇಸ್ರೇಲ್ ಕೂಡ ಪಾಲಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಈ ಕುರಿತು ಇಸ್ರೇಲ್ ಸರ್ಕಾರ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಸೌದಿ ಅರೇಬಿಯಾಗೆ ಇರಾನ್ ಪ್ರತೀಕಾರದ ದಾಳಿಯ ಆತಂಕವೂ ಇದೆ. ಶನಿವಾರ ನಡೆದ ದೂರವಾಣಿ ಸಂಭಾಷಣೆಯಲ್ಲಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಅಮೆರಿಕದ ಹೊಸ ದಾಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿದರೆ ಜಾಗತಿಕ ಆರ್ಥಿಕತೆಗೂ ಭಾರೀ ಹೊಡೆತ ಬೀಳಬಹುದು ಎಂದು ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ತಮ್ಮ ರಕ್ಷಣಾ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಿದ್ದರೂ, ಕುವೈತ್ ಮೇಲೆ ಇರಾನ್ ಬೆಂಬಲಿತ ಗುಂಪುಗಳಿಂದ ದಾಳಿ ನಡೆಯುವ ಸಾಧ್ಯತೆ ಇರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಮತ್ತಷ್ಟು ಉಲ್ಬಣವಾಗುವ ಆತಂಕ ಸದ್ಯಕ್ಕೆ ತಗ್ಗಿದಂತಾಗಿದೆ. ಆದರೆ, ಒಪ್ಪಂದ ಮಾತುಕತೆಗಳು ಯಶಸ್ವಿಯಾಗುತ್ತವೆಯೇ ಅಥವಾ ಮತ್ತೆ ಸಂಘರ್ಷ ಭುಗಿಲೆದ್ದೀತೇ ಎಂಬುದನ್ನು ಮುಂದಿನ ಕೆಲವು ದಿನಗಳ ರಾಜತಾಂತ್ರಿಕ ಬೆಳವಣಿಗೆಗಳು ನಿರ್ಧರಿಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com