ಜಾರ್ಜಿಯಾ: ಅಮೆರಿಕದ ಜಾರ್ಜಿಯಾದಲ್ಲಿ ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗುಂಡಿನ ದಾಳಿಯಲ್ಲಿ ಬಲಿಯಾದವರಲ್ಲಿ ಭಾರತೀಯ ಪ್ರಜೆಯೂ ಸೇರಿದ್ದಾರೆ ಎಂದು ಅಟ್ಲಾಂಟಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಶುಕ್ರವಾರ ಮುಂಜಾನೆ ಲಾರೆನ್ಸ್‌ವಿಲ್ಲೆ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಮಕ್ಕಳು ಮನೆಯೊಳಗೆ ಇದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗುಂಡಿನ ದಾಳಿಗೆ ದುಃಖ ವ್ಯಕ್ತಪಡಿಸಿದ ಅಟ್ಲಾಂಟಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್, ಗುಂಡು ಹಾರಿಸಿದ ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಮೃತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಶಂಕಿತನನ್ನು ಅಟ್ಲಾಂಟಾದ 51 ವರ್ಷದ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಫಾಕ್ಸ್ 5 ಅಟ್ಲಾಂಟಾ ವರದಿ ಮಾಡಿದೆ.
ಗ್ವಿನೆಟ್ ಕೌಂಟಿ ಪೊಲೀಸರ ಪ್ರಕಾರ, ಬಲಿಯಾದವರನ್ನು ವಿಜಯ್ ಕುಮಾರ್ ಅವರ ಪತ್ನಿ ಮೀಮು ಡೋಗ್ರಾ (43), ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಎಂದು ಗುರುತಿಸಲಾಗಿದೆ.
ಶಂಕಿತನ ವಿರುದ್ಧ ನಾಲ್ಕು ತೀವ್ರತರವಾದ ಹಲ್ಲೆ, ನಾಲ್ಕು ಅಪರಾಧ ಕೊಲೆ, ನಾಲ್ಕು ದುರುದ್ದೇಶಪೂರಿತ ಕೊಲೆ, ಮಕ್ಕಳ ಮೇಲಿನ ಕ್ರೌರ್ಯ ಮತ್ತು ಎರಡು ಮೂರನೇ ಹಂತದ ಮಕ್ಕಳ ಮೇಲಿನ ಕ್ರೌರ್ಯ ಆರೋಪ ಸೇರಿಸಿ ಒಟ್ಟು 12 ಕೇಸ್ ದಾಖಲಿಸಲಾಗಿದೆ.
ಶುಕ್ರವಾರ ಬೆಳಗಿನ ಜಾವ 2.30 ರ ಸುಮಾರಿಗೆ (ಸ್ಥಳೀಯ ಸಮಯ) ಆಗಮಿಸಿದ ಪೊಲೀಸರಿಗೆ ನಿವಾಸದೊಳಗೆ ನಾಲ್ಕು ವಯಸ್ಕರ ಶವಗಳನ್ನು ಕಂಡುಬಂದಿವೆ, ಅವರೆಲ್ಲರೂ ಮಾರಕ ಗುಂಡೇಟಿನಿಂದ ಗಾಯಗೊಂಡಿದ್ದರು ಎಂದು ವರದಿ ತಿಳಿಸಿದೆ. ಗುಂಡಿನ ದಾಳಿ ಆರಂಭವಾದಾಗ ಮೂವರು ಮಕ್ಕಳು ಅಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು, ಮಕ್ಕಳು ಕಬೋರ್ಡ್ ನಲ್ಲಿ ಅಡಗಿಕೊಂಡರು. ಮಕ್ಕಳಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ.
ಮಕ್ಕಳಲ್ಲಿ ಒಬ್ಬರು 911 ಗೆ ಕರೆ ಮಾಡುವಲ್ಲಿ ಯಶಸ್ವಿಯಾದರು, ಅಧಿಕಾರಿಗಳು ಕೆಲವೇ ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ತಲುಪಲು ಮಾಹಿತಿಯನ್ನು ಒದಗಿಸಿದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.